ಶ್ರೀವಿದ್ಯೇಶತೀರ್ಥಶ್ರೀಪಾದರು
ಉಡುಪಿ: ವಿದ್ಯಾಮಾನ್ಯತಿರ್ಥಶ್ರೀಪಾದರ ಪೀಠಾರೋಹಣದ ಶತಮಾನೋತ್ಸವದ ಪರ್ವಕಾಲದಲ್ಲಿ ಜುಲೈ 29ರಿಂದ ಸೆ. 26ರವರೆಗೆ ಭಂಡಾರಕೇರಿ ಮೂಲಮಠದಲ್ಲಿ ಶ್ರೀವಿದ್ಯೇಶತೀರ್ಥಶ್ರೀಪಾದರು 47ನೇ ಚಾತುಮಾರ್ಸ್ಯವ್ರತ ದೀಕ್ಷೆ ಕೈಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ತಪೋಭೂಮಿಯಾದ ಬಾರಕೂರಿನ ಭಂಡಾರಕೇರಿ ಮೂಲಮಠದಲ್ಲಿ 47ನೇ ಚಾತುಮಾರ್ಸ್ಯ ವ್ರತ ಮಹೋತ್ಸವ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ವತಿಯಿಂದ 100 ಜನ ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ ಪೂರ್ವಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12:30 ರವರೆಗೆ ಹಾಗೂ ಸಂಜೆ 3 ರಿಂದ ನಿಗದಿತ ಭಾಗ ಮುಗಿಯುವವರೆಗೆ 48 ವಿದ್ವಾಂಸರ ತಂಡದಿಂದ ನಾಲ್ಕು ವೇದಗಳ ಪಾರಾಯಣ ನಡೆಯಲಿದೆ. 36 ವಿದ್ವಾಂಸರ ಎರಡು ತಂಡಗಳಿಂದ ಮಹಾಭಾರತ ತಾತ್ಪರ್ಯ ರ್ನಿಣಯ 108 ಬಾರಿ ಕ್ರಮವಾಗಿ ಪಾರಾಯಣ, 16 ವಿದ್ವಾಂಸರ ತಂಡದಿಂದ ಸಮಗ್ರ ಶ್ರೀಮದ್ಭಾಗವತ ಪಾರಾಯಣ ಜರುಗಲಿದೆ ಎಂದು ತಿಳಿಸಿದರು.
ಪ್ರತಿದಿನ ಅಪರಾಹ್ನ 4 ರಿಂದ 5 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಂಜೆ 5 ರಿಂದ 6:30 ರವರೆಗೆ ವಿದ್ವಾಂಸರಿಂದ ಭಾರತ-ರಾಮಾಯಣಾದಿಗಳ ಉಪಾಖ್ಯಾನಗಳ ಬಗ್ಗೆ ಪ್ರವಚನ ಏರ್ಪಡಿಸಲಾಗಿದೆ. ಸೆ. 12 ರಿಂದ 26ರ ವರೆಗೆ 15 ವಿದ್ವಾಂಸರಿಂದ ವಿಶೇಷ ಪ್ರೋಷ್ಟಪದಿ ಭಾಗವತ ಪ್ರವಚನ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 6:30 ರಿಂದ ರಾತ್ರಿ 8:00 ರವರೆಗೆ ಹರಿಕಥಾ ಕಾಲಕ್ಷೇಪ, ಯಕ್ಷಗಾನ, ತಾಳಮದ್ದಳೆ, ದಾಸವಾಣಿ, ಶಾಸ್ತ್ರೀಯ ಸಂಗೀತ, ಗಮಕ ವಾಚನ-ವ್ಯಾಖ್ಯಾನ, ಭರತನಾಟ್ಯ, ವೀಣಾವಾದನ ಹಾಗೂ ವಿದ್ಯೇಶವಿಠಲಾಂಕಿತ ಕೃತಿಗಳ ಸಾಮೂಹಿಕ ಗಾಯನ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.
ವಿಟ್ಲಪಿಂಡಿ ಶ್ರೀಕೃಷ್ಣ ಜಯಂತಿ
ಸೆ. 5ರಂದು ಅಪರಾಹ್ನ 3ಕ್ಕೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಟ್ಲಪಿಂಡಿ ಶ್ರೀಕೃಷ್ಣ ಜಯಂತಿ ಮಹೋತ್ಸವ ಸಡಗರದಿಂದ ನೆರವೇರಲಿದೆ ಎಂದರು.
ಚಾತುರ್ಮಾಸ್ಯ ಸಮಿತಿ ಪದಾಧಿಕಾರಿಗಳಾದ ಜಯರಾಮ ಆಚಾರ್ಯ, ಶ್ರೀನಿವಾಸ ಯು.ಬಿ. , ನಾಗರಾಜ ಕೆದ್ಲಾಯ, ವಿಷ್ಣು ಪಾಡಿಗಾರ್, ರಾಜೇಶ್ ಉಪಾಧ್ಯ ಉಪಸ್ಥಿತರಿದ್ದರು.