ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನ ವತಿಯಿಂದ 81ನೇ ಮಹಾ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ನಡೆಯಿತು
ಕುಂದಾಪುರ: ದೇವರ ಒಲುಮೆಗೆ ಪಾತ್ರರಾಗಲು ಮತ್ತು ದೇವರನ್ನು ಒಲಿಸಿಕೊಳ್ಳಲು ಭಜನೆ ಸುಲಭ ಮಾರ್ಗವಾಗಿದೆ. ಭಕ್ತಿಯಿಂದ ಮಾಡಿದ ಪ್ರತಿಯೊಂದು ಕಾರ್ಯ ದೇವರಿಗೆ ಸಲ್ಲುತ್ತದೆ. ಭಜನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವುದಲ್ಲದೆ ಸಮಾಜದ ಒಗ್ಗಟ್ಟು ಹಾಗೂ ಬೆಳವಣಿಗೆ ಕೂಡ ಸಾಧ್ಯವಾಗುತ್ತದೆ ಎಂದು ನಿವೃತ್ತ ಲೆಕ್ಕಪರಿಶೋಧಕ ಮಂಜುನಾಥ ಖಾರ್ವಿ ಹೇಳಿದರು.
ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನ ವತಿಯಿಂದ 81ನೇ ಮಹಾ ಶಿವರಾತ್ರಿ ಮಹೋತ್ಸವ ಪ್ರಯುಕ್ತ ಗಂಗೊಳ್ಳಿಯ ಎಸ್.ವಿ.ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಆಯೋಜಿಸಲಾಗಿದ್ದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತ ಬಿ.ರಾಘವೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿ ಗ್ರಾಪಂ ಸದಸ್ಯ ರಾಜೇಂದ್ರ ಶೇರುಗಾರ್, ಮಂಜುನಾಥ ಸಾಲಿಯಾನ್, ಬಡಾನಿಡಿಯೂರು ಗ್ರಾಪಂ ಪಿಡಿಒ ನಾಗರತ್ನಾ, ಡಾ.ಸಪ್ತಮಿ ಕೆ., ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟ ಸಂಚಾಲಕ ಜಯಕರ ಪೂಜಾರಿ ಗುಲ್ವಾಡಿ ಶುಭಾಶಂಸನೆ ಮಾಡಿದರು. ಡಾ.ಸಪ್ತಮಿ ಕೆ.ಮರವಂತೆ ಮತ್ತು ಜಯಕರ ಪೂಜಾರಿ ಗುಲ್ವಾಡಿ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ರಾಜೇಶ ಪೂಜಾರಿ, ಮತ್ಸೊೃೀದ್ಯಮಿಗಳಾದ ಮಂಜುನಾಥ ಜಿ.ಟಿ., ಅನಿಲ್ ಸಾಲ್ಯಾನ್, ಗಂಗೊಳ್ಳಿ ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಶ್, ಬೈಂದೂರು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಅಶೋಕ ಎನ್.ಡಿ., ಭಜನಾ ಪರಿಷತ್ ಗಂಗೊಳ್ಳಿ ವಲಯ ಅಧ್ಯಕ್ಷ ಜಗದೀಶ ಪೂಜಾರಿ, ದೇವಸ್ಥಾನದ ಅಧ್ಯಕ್ಷ ಗುರುರಾಜ್, ಕಾರ್ಯದರ್ಶಿ ವರದರಾಜ್ ಜಿ.ಟಿ.ಮತ್ತು ಅರ್ಚಕ ಕೃಷ್ಣ ಜಿ.ಟಿ. ಉಪಸ್ಥಿತರಿದ್ದರು. ದೇವಸ್ಥಾನದ ಮಾಜಿ ಅಧ್ಯಕ್ಷ ಸುಂದರ ಜಿ.ಸ್ವಾಗತಿಸಿದರು.