ಬೇಕಲ ನೈಋತ್ಯದಲ್ಲಿರುವ ಹಳೆಯ ಸುರಂಗ
ವಿಜಯವಾಣಿ ಸುದ್ದಿಜಾಲ ಕುಂಬಳೆ
ಕೇರಳದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬೇಕಲ ಕೋಟೆಯಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದ್ದು, ಕೋಟೆಯ ಸುತ್ತಲೂ ಸುರಕ್ಷಿತ ವಾಕ್ ವೇ ನಿರ್ಮಿಸಬೇಕೆಂಬ ಆಗ್ರಹ ಮುಂಚೂಣಿಯಲ್ಲಿದೆ.
ಬೇಕಲ ಕೋಟೆಗೆ ಭೇಟಿ ನೀಡಲು ಬೆಳಗ್ಗೆ 6.30ರಿಂದ ಸಂಜೆ 6.30ರ ತನಕ ಅವಕಾಶವಿದ್ದು, ಸಂಜೆ 6 ಗಂಟೆಗೆ ಪ್ರವಾಸಿಗರನ್ನು ಕೋಟೆ ಒಳಗಿನಿಂದ ಹೊರಗೆ ಕಳುಹಿಸಲು ಪ್ರಾರಂಭಿಸಲಾಗುತ್ತದೆ. ಸಂಜೆ 5.30ಕ್ಕೆ ಟಿಕೆಟ್ ಕೌಂಟರ್ ಮುಚ್ಚುವುದರಿಂದ ಸಂಜೆಯ ಸೂರ್ಯಾಸ್ತವನ್ನು ವೀಕ್ಷಿಸಲು ಆಗಮಿಸುವ ವಿವಿಧ ಊರಿನ ಪ್ರವಾಸಿಗರು ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ.
ಸಮಯ ವಿಸ್ತರಣೆಗೆ ಚಿಂತನೆ
ಬೇಕಲ ಕೋಟೆಗೆ ಪ್ರವಾಸಿಗರು ಭೇಟಿ ನೀಡುವ ಸಮಯವನ್ನು ಮತ್ತೂ ಒಂದು ಗಂಟೆ ವಿಸ್ತರಿಸಲು ಪುರಾತತ್ವ ಇಲಾಖೆ ಚಿಂತಿಸಿದೆ. ಜತೆಗೆ ಸೂರ್ಯಾಸ್ತದ ವೀಕ್ಷಣೆ ಪ್ರದೇಶಕ್ಕೆ ಹೊಸದಾಗಿ 3 ಮೀ.ಅಗಲದ ನಡಿಗೆ ಮಾರ್ಗವನ್ನೂ ನಿರ್ಮಿಸಲಾಗಿದೆ ಎಂದು ತ್ರಿಶೂರ್ ವೃತ್ತದ ಅಧೀಕ್ಷಕ ಪುರಾತತ್ವ ಶಾಸಜ್ಞ ಎಸ್.ವಿಜಯಕುಮಾರ್ ನಾಯರ್ ತಿಳಿಸಿದ್ದಾರೆ.
ಕೋಟೆಯ ಪ್ರವೇಶದ್ವಾರ ಮುಚ್ಚಿದ ಬಳಿಕವೂ ಬೀಚ್ ಕಾಣುವಂತೆ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಬೇಗನೇ ಕೋಟೆಯನ್ನು ಮುಚ್ಚುವುದರಿಂದ ದೂರದ ಊರಿನಿಂದ ಆಗಮಿಸುವ ಪ್ರವಾಸಿಗರಿಗೆ ನಿರಾಶೆಯಾಗುತ್ತದೆ. ಈ ನಿಟ್ಟಿನಲ್ಲಿ ಕನಿಷ್ಠ ಒಂದು ಗಂಟೆ ವೀಕ್ಷಣೆ ಅವಧಿ ಹೆಚ್ಚಿಸಬೇಕು ಎಂದು ಬೇಕಲ ಪ್ರವಾಸೋದ್ಯಮ ಸಂಸ್ಥೆ ಸ್ಥಾಪಕ ಅಧ್ಯಕ್ಷ ಸೈಪುದ್ದೀನ್ ಕಳನಾಡ್ ಆಗ್ರಹಿಸಿದರು.
ಕಾಸರಗೋಡಿನ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಬೇಕಲ ಕೋಟೆ ಸದಾ ಜನಪ್ರಿಯ ಪ್ರದೇಶ. ಅತ್ಯಂತ ಶಾಂತ, ಮನಸ್ಸು ಸೆಳೆಯುವ ಬೇಕಲದ ವೀಕ್ಷಣೆಗೆ ವರ್ಷಗಳು ಸರಿದಂತೆ ಜನದಟ್ಟಣೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವೀಕ್ಷಣೆ ಸಮಯ ವಿಸ್ತರಿಸುವ ಅಗತ್ಯವಿದೆ. ಜತೆಗೆ ಕೋಟೆಯ ಸುತ್ತಲೂ ವಾಕ್‌ವೇ ನಿರ್ಮಿಸಿದರೆ ಪ್ರವಾಸಿ ಸ್ನೇಹೀ ಕೇಂದ್ರವಾಗಕಲಿದೆ. ಈ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
— ಎಸ್ ವಿಜಯಕುಮಾರ್ ನಾಯರ್, ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ