ಉಡುಪಿ: ಗುಣಮಟ್ಟದ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಹಾಗೂ ಉತ್ತಮ ಶಿಕ್ಷಣ ನೀಡಲು ಶಿಕ್ಷಕರೂ ಶಿಸ್ತು ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ತಂದೆ-&ತಾಯಿ ಹಾಗೂ ಸಮಾಜಕ್ಕೆ ಒಳಿತು ಮಾಡುವ, ಸಂಸ್ಕಾರವಂತ ಪ್ರಜೆಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಕಾಲೇಜ್ನ ಮಾಹಾಪೋಷಕ ನಾಡೋಜ. ಡಾ. ಜಿ.ಶಂಕರ್ ತಿಳಿಸಿದರು.
ಉಡುಪಿಯ ಪುರಭವನದಲ್ಲಿ ಮಂಗಳವಾರ (ಸೆ.29) ಆಯೋಜಿಸಿದ್ದ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ದಿನಾಚರಣೆ, ಕಾಲೇಜ್ನ ವಾರ್ಷಿಕ ಸಂಚಿಕೆ 'ಕಲಶ' ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಮಾದರಿಯಾಗಿ
ಉಡುಪಿ ಶಾಸಕ, ಕಾಲೇಜ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ, ಜನಪ್ರತಿನಿಧಿಗಳಾಗಿ ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೂ ಮಾತನಾಡಿ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲ ಸಹಕಾರ ಪಡೆಯಲು ಪ್ರಯತ್ನಿಸಲಾಗುವುದು. ಉತ್ತಮ ಫಲಿತಾಂಶ ಗಳಿಸಿ ಕಾಲೇಜ್ನ ಕೀರ್ತಿ ಹೆಚ್ಚಿಸಬೇಕು. ಇಲ್ಲಿ ಕಲಿತಂಥ ವಿದ್ಯಾರ್ಥಿನಿಯರು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಕೀಳರಿಮೆ ಬೇಡ
ಉಡುಪಿ ಜಿಲ್ಲಾ ಪೋಶ್ ಸಮಿತಿಯ ಅಧ್ಯಕ್ಷೆ ವಿದ್ಯಾ ಭಟ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಬಾರದು. ಸಾಧನೆಯ ದೊಡ್ಡ ಕನಸು ಕಾಣಬೇಕು. ಕಲಿಕೆಯನ್ನು ಎಂದಿಗೂ ನಿಲ್ಲಿಸಬಾರದು. ಸಕಾರಾತ್ಮಕ ಮನೋಭಾವದೊಂದಿಗೆ ಗುರಿ ಸಾಧನೆಗೆ ಪರಿಶ್ರಮ ಪಡಬೇಕು ಎಂದರು.
ಕಾಲೇಜ್ನ ಪ್ರಾಂಶುಪಾಲೆ ಪ್ರೊ. ನಿಕೇತನಾ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ನ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಾಜೇಂದ್ರ ಕೆ. ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕಿ ಪ್ರೊ.ಶ್ರೀಮತಿ ಅಡಿಗ ಹಾಗೂ ಸಹಾಯಕ ಪ್ರಾಧ್ಯಾಪಕಿ ಕವಿತಾ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಆಶಾ ವಂದಿಸಿದರು.
ಕಾಲೇಜ್ನ ಗ್ರಂಥಪಾಲಕ ವೆಂಕಟೇಶ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ವಾರ್ಷಿಕ ಸಂಚಿಕೆ 'ಕಲಶ'ವನ್ನು ಡಾ. ಜಿ.ಶಂಕರ್ ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳು ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪ್ರತಿಭೆ ಪ್ರದರ್ಶಿಸಿದರು. ತೀರ್ಪುಗಾರರಾಗಿ ವಿಶ್ವರೂಪ ಮಧ್ಯಸ್ಥ, ಕುಸುಮಾ ಕಾಮತ್ ಹಾಗೂ ಶರತ್ ಕುಮಾರ್ ಸಹಕರಿಸಿದರು. ವಿದ್ಯಾರ್ಥಿ ಸಂಘಕ್ಕೆ ಚುನಾಯಿತರಾದ ಪದಾಧಿಕಾರಿಗಳಿಗೆ ಚುನಾವಣಾ ಸಾಕ್ಷರತಾ ಸಮಿತಿಯ ಸಂಚಾಲಕ ಮಂಜುನಾಥ್ ಪ್ರತಿಜ್ಞಾವಿಧಿ ಬೋಧಿಸಿದರು.
ಸುಮಾರು 25 ವರ್ಷದ ಹಿಂದೆ ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕಂಡ ಕನಸು ಇಂದು 16 ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುವ ಮಟ್ಟಕ್ಕೆ ಕಾಲೇಜ್ ಬೆಳೆದಿದೆ. ಇಲ್ಲಿ ಸುಸಜ್ಜಿತ ಸಭಾಭವನ ನಿರ್ಮಿಸಲು ಕ್ರಮ, ವಿದ್ಯಾರ್ಥಿಗಳ ಅಗತ್ಯತೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ 25 ಲಕ್ಷ ರೂ. ನಿಧಿ ಮೀಸಲಿಡಲಾಗುವುದು.> ಡಾ. ಜಿ.ಶಂಕರ್. ಅಜ್ಜರಕಾಡು ಕಾಲೇಜ್ನ ಮಹಾಪೋಷಕ.