ಬಿ.ಸಿ.ರೋಡಿನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ.
ಸಾಮಾನ್ಯವಾಗಿ ಯಾವುದೇ ಊರಿನ ಬಸ್ ನಿಲ್ದಾಣಗಳು ಪ್ರಯಾಣಿಕರು, ಬಸ್‌ಗಳಿಂದ ಸದಾ ಗಿಜಿಗಿಡುತ್ತಿರುತ್ತವೆ. ಅಲ್ಲಿರುವ ಅಂಗಡಿಗಳಲ್ಲಿ ವ್ಯಾಪಾರ, ವಹಿವಾಟ ಭರ್ಜರಿಯಾಗಿ ನಡೆಯಿತ್ತಿರುತ್ತದೆ. ಆದರೆ ಇದಕ್ಕೆಲ್ಲ ಅಪವಾದವೆನ್ನುವಂತೆ ಬಿ.ಸಿ.ರೋಡಿನಲ್ಲಿರುವ ಕೆಎಸ್‌ಆರ್‌ಟಿಸಿ (ಪುತ್ತೂರು ವಿಭಾಗ)ಬಸ್ ನಿಲ್ದಾಣವಿದೆ. ಸುಸಜ್ಜಿತವಾದ ವ್ಯವಸ್ಥೆಗಳಿದ್ದರೂ ಬಸ್ ನಿಲ್ದಾಣ ಮಾತ್ರ ಬಿಕೋ ಎನ್ನುತ್ತಿರುತ್ತದೆ.
ಇಲ್ಲಿ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಬಸ್‌ಗಳು ಬಂದು ಹೋಗುತ್ತವೆ. ಪ್ರಯಾಣಿಕರ ಜಂಜಾಟವಿಲ್ಲ. ಆಸನಗಳು ಖಾಲಿ ಖಾಲಿ. ಪ್ರಶಾಂತವಾಗಿರುವ ಈ ಸ್ಥಳ ಯೋಗ, ಧ್ಯಾನ ಮಾಡಲು ಸೂಕ್ತ ಎನ್ನುವಂತಿದೆ.
ಯಾಕೆ ಈ ಪರಿಸ್ಥಿತಿ?
ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳ ಪ್ರವೇಶಕ್ಕೆ ಏಕಮುಖ ಸಂಪರ್ಕ ಮಾತ್ರ ಇದೆ. ಬೇರೆ ಊರುಗಳಿಂದ ಬಂದು ಮಂಗಳೂರಿಗೆ ಹೋಗುವ ಸರ್ಕಾರಿ ಬಸ್‌ಗಳು ನಿಲ್ದಾಣ ಪ್ರವೇಶಿಸುತ್ತವೆ. ಮಂಗಳೂರಿನಿಂದ ಬಿ.ಸಿ.ರೋಡು ಮೂಲಕ ರಾಜ್ಯದ ಇತರ ಊರುಗಳಿಗೆ ಹೋಗುವ ಬಸ್‌ಗಳಿಗೆ ಪ್ರವೇಶ ಸಾಧ್ಯವಿಲ್ಲದ ಕಾರಣ ಪ್ರಯಾಣಿಕರು ಇಲ್ಲಿಗೆ ಬರುವುದಿಲ್ಲ.
ಮಂಗಳೂರಿಗೆ ಹೋಗುವ ಪ್ರಯಾಣಿಕರು ಕೂಡ ಬಿಎಸ್‌ಎನ್‌ಎಲ್ ಕಚೇರಿ ಬಳಿ ಇರುವ ನಿಲ್ದಾಣದ ಬಳಿ ಬಸ್ ಹತ್ತುವುದರಿಂದ ಈ ನಿಲ್ದಾಣಕ್ಕೆ ಬರುವ ಅವಶ್ಯಕತೆಯೇ ಇಲ್ಲ. ಬಸ್‌ಗಳು ಕೇವಲ ಎಂಟ್ರಿ ಹಾಕಿಸಲು ಮಾತ್ರ ಇಲ್ಲಿಗೆ ಬರುತ್ತವೆ. ಗ್ರಾಮೀಣ ಭಾಗಕ್ಕೆ ಹೋಗುವ ಕೆಲವು ಬಸ್‌ಗಳು ಇಲ್ಲಿಂದ ಹೊರಡುತ್ತವೆ, ಹೆಚ್ಚಿನ ಬಸ್‌ಗಳು ತಲಪಾಡಿಯಲ್ಲಿರುವ ಡಿಪೋದಿಂದಲೇ ಹೋಗುತ್ತವೆ. ಖಾಸಗಿ ಬಸ್ ನಿಲ್ದಾಣ, ರಿಕ್ಷಾ ನಿಲ್ದಾಣ, ಸರ್ಕಾರಿ ಕಚೇರಿಗಳೆಲ್ಲವೂ ಹೃದಯ ಭಾಗದಲ್ಲಿರುವ ಕಾರಣ ಅಲ್ಲಿಯೇ ಎಲ್ಲ ಬಸ್‌ಗಳು ನಿಲ್ಲುವುದರಿಂದ ಈ ಬಸ್ ನಿಲ್ದಾಣ ನಿಷ್ಪ್ರಯೋಜಕವಾಗಿದೆ.
ನಿರ್ಜನ ನಿಲ್ದಾಣ!
ಬಿ.ಸಿ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಓರ್ವ ಟಿಸಿ ಇದ್ದಾರೆ. ಟಿಕೆಟ್ ಎಂಟ್ರಿ, ಪಾಸ್ ವಿತರಣೆ ಸೇರಿದಂತೆ ಎಲ್ಲ ಜವಾಬ್ದಾರಿಯನ್ನು ಅವರೊಬ್ಬರೇ ನಿಭಾಯಿಸಬೇಕು. ಒಂದು ಜೆರಾಕ್ಸ್ ಅಂಗಡಿ, ಇನ್ನೊಂದು ಇಂಜಿನಿಯರ್ ಕಚೇರಿಯಿದೆ. ಉಳಿದೆರಡು ಕೊಠಡಿಗಳಲ್ಲಿ ಸರಕುಗಳನ್ನು ದಾಸ್ತನಿಡಲಾಗಿದೆ. ಸಂಜೆಯ ವೇಳೆ ಹಿರಿಯ ನಾಗರಿಕರು ವಾಕಿಂಗ್‌ಗೆ ಬರುತ್ತಾರೆ. 6 ಗಂಟೆಯ ಬಳಿಕ ಬಸ್ ನಿಲ್ದಾಣ ನಿರ್ಜನವಾಗುತ್ತದೆ. ಆ ಬಳಿಕ ಏನೇ ಅನಾಚಾರ, ಅವಘಡ, ದುರ್ಘಟನೆಗಳು ನಡೆದರೂ ಗೊತ್ತಾಗುವುದಿಲ್ಲ. ಅಗತ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳಿಲ್ಲ. ಬಸ್ ನಿಲ್ದಾಣದ ಕೆಳಭಾಗವನ್ನು ಇತ್ತೀಚೆಗೆ ಖಾಸಗಿ ಪೇ ಪಾರ್ಕಿಂಗ್ ಆಗಿ ಪರಿವರ್ತಿಸಲಾಗಿದೆ.
10 ಕೋಟಿ ರೂ.ವೆಚ್ಚದ ಕಾಮಗಾರಿ
2015 ಏಪ್ರಿಲ್ 24ಕ್ಕೆ ಶಿಲಾನ್ಯಾಸ ನಡೆದು 2017 ಅಕ್ಟೋಬರ್ 22ರಂದು ನಿಲ್ದಾಣ ಉದ್ಘಾಟನೆಗೊಂಡಿತ್ತು. 1.5 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಬೇಸ್‌ಮೆಂಟ್, ನೆಲಅಂತಸ್ತು ಹಾಗೂ ಮೇಲಂತಸ್ತಿನಲ್ಲಿ ಬಸ್ ನಿಲ್ದಾಣದ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ.
ಈ ಬಸ್ ನಿಲ್ದಾಣ ಲವರ್ಸ್ ಪಾರ್ಕ್ ಆಗಿದೆ. ಸಂಜೆ ನಮ್ಮ ಅಂಗಡಿ ಬಂದ್ ಆದ ಬಳಿಕ ಈ ಪರಿಸರದಲ್ಲಿ ಜನ ಸಂಚಾರ ಇರುವುದಿಲ್ಲ. ನಾನು, ಟಿಸಿ, 5 ಮಂದಿ ವೃದ್ಧರು ಮಾತ್ರ ಇರುತ್ತಾರೆ. ಗುರುವಾರ ಸಂಜೆ ನಡೆದ ಅಹಿತರ ಘಟನೆಯಂತೆ ಏನೇ ನಡೆದರೂ ಇಲ್ಲಿ ಕೇಳುವವರಿಲ್ಲ. ಬಸ್ ನಿಲ್ದಾಣ ಯಾರಿಗೂ ಪ್ರಯೋಜನಕ್ಕೆ ಇಲ್ಲವೆಂದಾದರೆ ಕಟ್ಟಿಸಿರುವುದು ಯಾಕೆ?. ಕೋಕಿಲ, ಅಂಗಡಿ ವ್ಯಾಪಾರಿ.
— ಕೋಕಿಲ, ಅಂಗಡಿ ವ್ಯಾಪಾರಿ.