ತಲ್ಲೂರು ಬಳಿ ರಾ.ಹೆ.66ರಲ್ಲಿ ಅಳವಡಿಸಿರುವ ಬ್ಯಾರಿಕೇಡ್. 
ಉಡುಪಿ

ಸವಾರರಿಗೆ ಬ್ಯಾರಿಕೇಡ್ ಕಂಟಕ

ಇಂದಿರಾ ಎನ್ ಕೆ

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಒಂದೊಮ್ಮೆ ವಾಹನಗಳ ವೇಗಕ್ಕೆ ಕಡಿವಾಣ ಹಾಕಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟ ಬ್ಯಾರಿಕೇಡ್‌ಗಳು ಹಲವು ಕಡೆ ಅನಾಥವಾಗಿ ಬಿದ್ದಿವೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಟ್ಟ ಹೆಚ್ಚಿನ ಬ್ಯಾರಿಕೇಡ್‌ಗಳು ಕಂಡ ಕಂಡ ವಾಹನಗಳಿಂದ ಡಿಕ್ಕಿ ಹೊಡೆಸಿಕೊಂಡು ದುಸ್ಥಿತಿಯಲ್ಲಿವೆ. ಅಪಾಯಕಾರಿ ತಿರುವು, ಸೂಚನಾ ಫಲಕಗಳಿಲ್ಲದ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ನೀಡಲು ಬಳಸಲಾಗಿರುವ ಇವು ಕೆಲವೆಡೆ ನಿರ್ವಹಣೆ ಇಲ್ಲದೆ ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿವು.

ರಿಫ್ಲೆಕ್ಟರ್

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಹಳೆಯ ಬ್ಯಾರಿಕೇಡ್‌ಗಳು ಬಹುತೇಕ ಮುರಿದುಹೋಗಿದ್ದು, ಬಣ್ಣ ಮಾಸಿರುವ ಜತೆಗೆ ರಿಪ್ಲೆಕ್ಟರ್ ಸ್ಟಿಕರ್‌ಗಳು ಕಳಚಿಕೊಂಡಿವೆ. ರಾತ್ರಿ ಸಮಯದಲ್ಲಿ ಇವುಗಳು ವಾಹನ ಸವಾರರ ಗಮನಕ್ಕೆ ಬಾರದಿರುವುದರಿಂದ ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಿವೆ. ನಿಯಮ ಪ್ರಕಾರ ರಾತ್ರಿ ವೇಳೆ ಬ್ಯಾರಿಕೇಡ್‌ಗಳನ್ನು ಬದಿಗೆ ಸರಿಸಬೇಕು. ಆದರೆ ಕೆಲವೆಡೆ ಈ ನಿಯಮ ಪಾಲನೆಯಾಗುತ್ತಿಲ್ಲ. ಅದರಿಂದ ರಾತ್ರಿ ಸಂಚರಿಸುವ ವಾಹನ ಸವಾರರಿಗೆ ಅಪಾಯದ ಸಾಧ್ಯತೆ ಹೆಚ್ಚು. ರಾತ್ರಿ ಸಮಯದಲ್ಲಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವುದು ಹಾಗೂ ಬೆಳಗ್ಗೆ ಅಗತ್ಯವಿರುವ ಕಡೆಗಳಲ್ಲಿ ಇರಿಸುವ ಕುರಿತು ಅರಿವು ಮೂಡಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ನಡೆಯಬೇಕಿದೆ.

ದ್ವಿಚಕ್ರ ವಾಹನ ಸವಾರರಿಗೆ ಆಪತ್ತು

ಸಿಂಗಲ್ ಸ್ಟಾೃಂಡ್ ಬ್ಯಾರಿಕೇಡ್‌ಗಳು ಗಾಳಿ-ಮಳೆಗೆ ಆಗಾಗ ರಸ್ತೆಗೆ ಬೀಳುತ್ತಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ನಿಲ್ಲಿಸುವುದು ಕಷ್ಟಕರವಾಗಿದೆ. ಭಾರಿ ಮಳೆ, ಗಾಳಿ ಹಾಗೂ ರಾತ್ರಿ ಸಮಯದಲ್ಲಿ ಅವುಗಳು ರಸ್ತೆಗೆ ಬಿದ್ದರೆ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಸಾಧ್ಯತೆಯಿದೆ. ಇದಲ್ಲದೆ ಭಾರಿ ವಾಹನಗಳು ವೇಗವಾಗಿ ಸಂಚರಿಸುವಾಗ ಉಂಟಾಗುವ ಗಾಳಿಯ ಒತ್ತಡಕ್ಕೂ ಸಿಂಗಲ್ ಸ್ಟಾೃಂಡ್ ಬ್ಯಾರಿಕೇಡ್‌ಗಳು ಬಿದ್ದುಹೋಗುತ್ತಿವೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಹಾಗೂ ಅಪಾಯ ಉಂಟಾಗುತ್ತಿದೆ. ಈ ಹಿನ್ನೆಲೆ ಹೆಚ್ಚಿನ ಸ್ಥಿರತೆ ಹೊಂದಿರುವ ಡಬಲ್ ಸ್ಟಾೃಂಡ್ ಬ್ಯಾರಿಕೇಡ್‌ಗಳ ಬಳಕೆಗೆ ಪೊಲೀಸ್ ಇಲಾಖೆ ಮುಂದಾಗಿದ್ದು, ದಾನಿಗಳ ಸಹಕಾರದೊಂದಿಗೆ ಅವುಗಳನ್ನು ಪಡೆಯಲು ನಿರ್ಧರಿಸಿದೆ.

ಹೊಸ ಬ್ಯಾರಿಕೇಡ್‌ಗೆ ಬೇಡಿಕೆ

ರಾಷ್ಟ್ರೀಯ ಹೆದ್ದಾರಿಯ ತಲ್ಲೂರು, ಕುಂದಾಪುರದ ಸಂಗಮ್ ಜಂಕ್ಷನ್, ಹೆಮ್ಮಾಡಿ ಸೇರಿದಂತೆ ಹಲವು ಕಡೆಗಳಲ್ಲಿ ವಾಹನಗಳ ಡಿಕ್ಕಿಯಿಂದ ಕೆಲವು ಬ್ಯಾರಿಕೇಡ್‌ಗಳು ನುಜ್ಜುಗುಜ್ಜಾಗಿವೆ. ಇನ್ನೂ ಕೆಲವು ಬಣ್ಣ ಕಳೆದುಕೊಂಡು, ಚಕ್ರಗಳು ಮುರಿದ ಸ್ಥಿತಿಯಲ್ಲಿವೆ. ಹೀಗಾಗಿ ಇಂತಹ ಬ್ಯಾರಿಕೇಡ್‌ಗಳನ್ನು ದುರಸ್ತಿಗೊಳಿಸಬೇಕು ಅಥವಾ ಸುಸ್ಥಿತಿಯಲ್ಲಿರುವ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಹಳೆಯ ಬ್ಯಾರಿಕೇಡ್‌ಗಳು ಬಹುತೇಕ ಮುರಿದುಹೋಗಿದ್ದು, ಇನ್ನೂ ಕೆಲವು ಬಣ್ಣ ಕಳೆದುಕೊಂಡು ಜತೆಗೆ ರಿಪ್ಲೆಕ್ಟರ್ ಸ್ಟಿಕ್ಕರ್‌ಗಳು ಕೂಡ ಕಳಚಿಕೊಂಡಿವೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಹಾಗೂ ಅಪಾಯ ಉಂಟಾಗಬಹುದು. ಇಂತಹ ಬ್ಯಾರಿಕೇಡ್‌ಗಳನ್ನು ದುರಸ್ಥಿಗೊಳಿಸಬೇಕು ಅಥವಾ ಸುಸ್ಥಿತಿಯಲ್ಲಿರುವ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು.

— ಪ್ರಶಾಂತ ಖಾರ್ವಿ ಸಾಮಾಜಿಕ ಕಾರ್ಯಕರ್ತ, ಗಂಗೊಳ್ಳಿ