ಮಲ್ಲಿಗೆ ಪ್ರಸಾದ ಪಡೆಯಲು ನಿಂತಿರುವ ಭಕ್ತರ ಸಮೂಹ. 
ಉಡುಪಿ

ಬಪ್ಪನಾಡು ಶ್ರೀದೇವಿಗೆ ಶಯನೋತ್ಸವ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಶ್ರೀದೇವಿಗೆ ಶಯನೋತ್ಸವ ನಡೆಯಿತು.
ಮಲ್ಲಿಗೆ ಪ್ರಿಯ ಶ್ರೀದೇವಿಗೆ ಭಕ್ತರಿಂದ ಲಕ್ಷಕ್ಕಿಂತಲೂ ಮಿಕ್ಕಿ ಮಲ್ಲಿಗೆ ದಂಡೆ ಸಮರ್ಪಣೆ ಕಾರ್ಯ ನಡೆಯಿತು. ಸೋಮವಾರದವರೆಗೆ ಮಲ್ಲಿಗೆ ಅಟ್ಟಿಗೆ(4ಚೆಂಡು) 700 ರೂ. ದರ ಇತ್ತು. ಮಂಗಳವಾರ ಏಕಾಏಕಿ ಮಲ್ಲಿಗೆ ಅಟ್ಟಿ ದರ 1,400 ರೂ. ಆಗಿತ್ತು. ಭಕ್ತರು ಅಧಿಕ ದರ ತೆತ್ತು ದಾಖಲೆ ಸಂಖ್ಯೆಯಲ್ಲಿ ಮಲ್ಲಿಗೆ ದಂಡೆಗಳನ್ನು ಸಮರ್ಪಿಸಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲದೆ ದೂರದ ಬೆಂಗಳೂರು, ಮುಂಬೈನ ಭಕ್ತರು ಬಪ್ಪನಾಡು ದುರ್ಗೆಗೆ ಮಲ್ಲಿಗೆ ಸಮರ್ಪಿಸಿದ್ದಾರೆ.
ಭಕ್ತರು ಸಮರ್ಪಿಸಿದ ಮಲ್ಲಿಗೆಗಳನ್ನು ಒಳಾಂಗಣದ ಜಗುಲಿಯಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗುತ್ತದೆ. ಬಲಿ ಮುಗಿದು ರಾತ್ರಿ ಪೂಜೆ ಬಳಿಕ ಮಲ್ಲಿಗೆಯನ್ನು ಗರ್ಭಗುಡಿಯೊಳಗೆ ಲಿಂಗರೂಪಿಣಿ ದೇವಿಯ ಸುತ್ತಲೂ ಇರಿಸಿ ಇಡೀ ದೇವಿಯ ಆವಾಸಸ್ಥಾನ ಮಲ್ಲಿಗೆಯಿಂದ ತುಂಬಿ ಬಿಡುತ್ತದೆ. ಮಲ್ಲಿಗೆ ಕಂಪಿನಲ್ಲಿ ದೇವಿ ಸುಖ ನಿದ್ದೆಗೆ ಜಾರುತ್ತಾಳೆ ಎಂಬುದು ಭಕ್ತರ ನಂಬಿಕೆ. ಈ ಕಾರಣಕ್ಕಾಗಿ ದೇವಿಯ ನಿದ್ರೆಗೆ ಭಂಗ ಉಂಟಾಗದಂತೆ ಸುತ್ತ ನಿಶಬ್ಧ ವಾತಾವರಣ, ದೇವಾಲಯದ ಗಂಟೆಯನ್ನು ಶಬ್ದ ಮಾಡದಂತೆ ಕಟ್ಟಲಾಗುತ್ತದೆ.
ಬುಧವಾರ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ಕದ ತಟ್ಟುವುದು, ಗಂಟಾ ನಾದದ ಬಳಿಕ ಗರ್ಭಗುಡಿ ಬಾಗಿಲು ತೆರೆದು ಕ್ಷೇತ್ರದ ತಂತ್ರಿಗಳಿಂದ ಕವಾಟೋದ್ಘಾಟನೆ ಶ್ರೀದೇವಿಗೆ ವಿಶೇಷ ಪೂಜೆ, ಭಕ್ತರಿಗೆ ಪ್ರಸಾದ ರೂಪದಲ್ಲಿ ಮಲ್ಲಿಗೆ ವಿತರಿಸಲಾಯಿತು. ಭಕ್ತರು ಬೆಳಗಿನ ಜಾವ ಪ್ರಸಾದಕ್ಕೆ ಆಗಮಿಸಿದ್ದರು.