ಬಿ.ಸಿ.ರೋಡಿನ ರೈಲು ನಿಲ್ದಾಣ.
ಬಂಟ್ವಾಳ: ಬಂಟ್ವಾಳ ರೈಲ್ವೆ ನಿಲ್ದಾಣ ಸಹಿತ ದೇಶದ ಹಲವು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಪ್ರಧಾನಮಂತ್ರಿ ನರೇಂದ್ರ ಮೋದಿ 2024ರಲ್ಲಿ ವರ್ಚುವಲ್ ಪ್ರಕ್ರಿಯೆ ಮೂಲಕ ನೆರವೇರಿಸಿದ್ದರು. ಅದೀಗ ಪೂರ್ಣವಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಅಮೃತ ಭಾರತ ಸ್ಟೇಶನ್ ಸ್ಕೀಮ್‌ನ (ಎಪಿಎಸ್‌ಎಸ್) ಎರಡನೇ ಹಂತದಲ್ಲಿ ನವೀಕರಣಗೊಂಡ ನೈಋತ್ಯ ರೈಲ್ವೆ ವಲಯದ ನಾಲ್ಕು ರೈಲ್ವೆ ನಿಲ್ದಾಣಗಳು ಅಭಿವೃದ್ಧಿಗೊಂಡರೆ, ದೇಶದಾದ್ಯಂತ ಒಟ್ಟು 75 ರೈಲು ನಿಲ್ದಾಣಗಳು ಅಭಿವೃದ್ಧಿಗೊಂಡಿವೆ. ಇವೆಲ್ಲವೂ ಜುಲೈ 17ರಂದು ವರ್ಚುವಲ್ ಪ್ರಕ್ರಿಯೆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಕೊಪ್ಪಳ, ಬಾದಾಮಿ ಹಾಗೂ ಅಳ್ನಾವರ, ಮೈಸೂರು ವಿಭಾಗದ ಬಂಟ್ವಾಳ ರೈಲ್ವೆ ನಿಲ್ದಾಣ ಇದರಲ್ಲಿ ಸೇರಿವೆ. ಅಳ್ನಾವರ 17.2 ಕೋಟಿ ರೂ., ಬಾದಾಮಿ 15.1 ಕೋಟಿ ರೂ., ಕೊಪ್ಪಳ 21.14 ಕೋಟಿ ರೂ., ಬಂಟ್ವಾಳ 26.18 ಕೋಟಿ ರೂ. ವೆಚ್ಚದಲ್ಲಿ ಮರುನಿರ್ಮಾಣವಾಗಿವೆ.
ಬಂಟ್ವಾಳದಲ್ಲಿ ಏನಾಗಿದೆ?
ಬಂಟ್ವಾಳ ರೈಲು ನಿಲ್ದಾಣದ ಪುನಃ ಅಭಿವೃದ್ಧಿ ಕಾಮಗಾರಿ 26.18 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ವಹಿಸಲಾಗಿದೆ. ಇಲ್ಲಿ ಆಗಿರುವ ಪ್ರಮುಖ ಬದಲಾವಣೆಗಳು ಇವು. ಪ್ರವೇಶ ದ್ವಾರದಲ್ಲಿ ಕರಾವಳಿಯ ಸಂಸ್ಕೃತಿ ಬಿಂಬಿಸುವ ಚಿತ್ರಗಳು ಗಮನ ಸೆಳೆಯುತ್ತವೆ. ಪ್ರಯಾಣಿಕರ ನಿರೀಕ್ಷಣಾ ಮಂದಿರಗಳು ಮತ್ತು ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳ ಸುಧಾರಣೆಗೊಂಡಿವೆ.
ಪ್ರಯಾಣಿಕರಿಗೆ ಕುಳಿತುಕೊಳ್ಳಲು ಉತ್ತಮ ವ್ಯವಸ್ಥೆ ಮತ್ತು ಹೆಚ್ಚುವರಿ ಅನುಕೂಲ ಒದಗಿಸಲಾಗಿದೆ. ಡ್ರಾಪ್-ಆಫ್ ಮತ್ತು ಪಿಕ್-ಅಪ್ ಪ್ರದೇಶಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ವಾಹನಗಳ ಸುರಕ್ಷಿತ ಪೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುರಕ್ಷತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಇಡೀ ಸ್ಟೇಷನ್ ಅನ್ನು ಸಿಸಿ ಕ್ಯಾಮರಾದಡಿ ನಿಗಾ ವಹಿಸಲಾಗಿದೆ.
ಪ್ಲಾಟ್‌ಫಾರ್ಮ್ ಮೂಲಸೌಕರ್ಯ ಬಲಪಡಿಸಲು ಪೂರ್ಣ ಉದ್ದದ ಪ್ಲಾಟ್‌ಫಾರ್ಮ್ ಶೆಲ್ಟರ್ ಒದಗಿಸಲಾಗಿದೆ, ಇದರಿಂದ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಪ್ರಯಾಣಿಕರಿಗೆ ರಕ್ಷಣೆ ಸಿಗುತ್ತದೆ. ನಿಲ್ದಾಣ ಕಟ್ಟಡದ ಮುಂಭಾಗದಲ್ಲಿನ ಪ್ಲಾಟ್‌ಫಾರ್ಮ್ ಮೇಲ್ಮೈ ಸುಧಾರಣೆ ಮಾಡಲಾಗಿದ್ದು, ಸುಲಭ ಸಂಚಾರಕ್ಕೆ ಅನುಕೂಲವಾಗಿದೆ. ನಿಲ್ದಾಣದ ಒಳಾಂಗಣ ಸುಧಾರಣೆಯಲ್ಲಿ ಆಧುನಿಕ ಫರ್ನಿಚರ್, ಬೆಳಕು ವ್ಯವಸ್ಥೆ ಮತ್ತು ಲ್ಯಾಂಡ್‌ಸ್ಕೇಪಿಂಗ್ ಕಾರ್ಯ ಕೈಗೊಳ್ಳಲಾಗಿದೆ.
ಪ್ರವೇಶ/ನಿರ್ಗಮನ ಕಮಾನು ನಿರ್ಮಿಸುವ ಮೂಲಕ ನಿಲ್ದಾಣದ ವಾಸ್ತುಶೈಲಿ ಸುಧಾರಿಸಲಾಗಿದ್ದು, ವಿಶಿಷ್ಟ ರೂಪ ನೀಡಲಾಗಿದೆ. ಉನ್ನತ ಮಟ್ಟದ ಬೆಳಕು ವ್ಯವಸ್ಥೆ, ಎಲ್.ಇ.ಡಿ. ಪ್ಲಾಟ್‌ಫಾರ್ಮ್ ಹೆಸರು ಫಲಕಗಳು, ಎಲ್.ಇ.ಡಿ. ಸೈನ್‌ಬೋರ್ಡ್‌ಗಳು ಮತ್ತು ಫಸಾಡ್ ಲೈಟಿಂಗ್ ಅಳವಡಿಸಲಾಗಿದೆ, ಇದರಿಂದ ದೃಶ್ಯತೆ ಹೆಚ್ಚುವುದರ ಜತೆಗೆ ವಿದ್ಯುತ್ ಉಳಿತಾಯವೂ ಸಾಧ್ಯವಾಗಿದೆ.
ಪ್ರಯಾಣಿಕರ ಮಾಹಿತಿಗಾಗಿ ಕೋಚ್ ಇಂಡಿಕೇಷನ್ ಬೋರ್ಡ್‌ಗಳು, ರೈಲು ಇಂಡಿಕೇಷನ್ ಬೋರ್ಡ್‌ಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ ಪಿಎ ಸಿಸ್ಟಮ್, ಮತ್ತು ಗಡಿಯಾರಗಳು ಒದಗಿಸಲಾಗಿದೆ. ಎರಡನೇ ಪ್ಲಾಟ್‌ಫಾರ್ಮ್‌ನಿಂದ ಒಂದನೇ ಪ್ಲಾಟ್‌ಫಾರ್ಮ್ ಸಂಪರ್ಕಿಸಲು ಫೂಟ್ ಓವರ್ ಬ್ರಿಡ್ಜ್ ಮತ್ತು ಮೆಟ್ಟಿಲು ಹತ್ತಲು ಸಾಧ್ಯವಾಗದವರಿಗೆ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗಲ್ಲದೆ, ವಿಶಿಷ್ಟ ಚೇತನರಿಗೆಂದು ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗಿದೆ. ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಚಾರ ವ್ಯವಸ್ಥೆ ಸುಧಾರಣೆ
ಬಂಟ್ವಾಳ ರೈಲು ನಿಲ್ದಾಣದ ಪುನಃ ಅಭಿವೃದ್ಧಿ ಯೋಜನೆ ಪ್ರಯಾಣಿಕರ ಆರಾಮ, ಸಂಚಾರ ವ್ಯವಸ್ಥೆ ಸುಧಾರಣೆ ಮತ್ತು ಮೂಲಸೌಕರ್ಯ ನವೀಕರಣದ ಮೇಲೆ ಕೇಂದ್ರೀಕರಿಸಿ, ನಿಲ್ದಾಣವನ್ನು ಆಧುನಿಕ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿ ಕೇಂದ್ರವಾಗಿ ಪರಿವರ್ತಿಸುತ್ತದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ. ಹಿರಿಯ ಪ್ರಚಾರ ನಿರೀಕ್ಷಕ ಎಚ್.ಶಿವಕುಮಾರ್ ಮತ್ತು ಮನು ಎಚ್.ಆರ್. ಜತೆಗಿದ್ದರು.
ಏನೆಲ್ಲ ಆಗಬೇಕಿದೆ?
ಬಂಟ್ವಾಳ ರೈಲ್ವೆ ಪ್ರಯಾಣಿಕ ಸ್ನೇಹಿಯಾಗಲು ಇಲ್ಲಿ ರಾಜಕೀಯ ರಹಿತವಾಗಿ ನಾಗರಿಕರ ರಕ್ಷಾ ಸಮಿತಿ ಪುನಃ ಸಂಘಟಿಸಬೇಕಿದೆ. ಎರಡನೇ ಪ್ಲಾಟ್‌ಫಾರ್ಮ್‌ಗೆ ರೈಲುಗಳ ಆಗಮನ ಹೆಚ್ಚಿಸಬೇಕು. ಎರಡನೇ ಪ್ಲಾಟ್‌ಫಾರ್ಮ್ ಮೂಲಕ ಬಿ.ಸಿ.ರೋಡ್ ಪೇಟೆ ತಲುಪಲು ಹಾಗೂ ಬಸ್ಸು ನಿಲ್ದಾಣ ತಲುಪಲು ನಡೆದುಕೊಂಡು ಹೋಗುವಷ್ಟು ಹತ್ತಿರವಿದ್ದು, ಈ ಭಾಗ (ಕೈಕುಂಜ)ದ ರಸ್ತೆ ಅಭಿವೃದ್ಧಿಪಡಿಸಬೇಕು. ರೈಲು ಇಳಿದು ಹೋಗುವ ಪ್ರಯಾಣಿಕರು ಗೊಂದಲಕ್ಕೆ ಒಳಗಾಗದಂತೆ ಅವರಿಗೆ ಸೂಕ್ತ ಮಾರ್ಗದರ್ಶನ ವ್ಯವಸ್ಥೆ ಕಲ್ಪಿಸಬೇಕು. ರೈಲ್ವೆ ನಿಲ್ದಾಣದ ಮಾಹಿತಿ ತಿಳಿಯಲು ಆ್ಯಪ್‌ಗಳು ಇದ್ದರೂ ನಿಲ್ದಾಣದ ದೂರವಾಣಿ ಸಂಖ್ಯೆ ಸಾರ್ವಜನಿಕರಿಗೆ ದೊರಕುವಂತಿರಬೇಕು. ರೈಲ್ವೆ ನಿಲ್ದಾಣದಲ್ಲಿ ನಮೂದಿಸಲಾದ ವೈದ್ಯರು ತುರ್ತು ಸೇವೆಗೆ ಲಭ್ಯರಾಗುವಂತಿರಬೇಕು. ಕೆಲವೊಮ್ಮೆ ವೈದ್ಯರೇ ಇಲ್ಲದಿದ್ದರೆ ಸಮಸ್ಯೆ ಉದ್ಭವವಾಗಬಹುದು.