ಕಾರ್ನಾಡು ವಾರದ ಸಂತೆಗೆ ಮೂಲ್ಕಿ ನಗರ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿದರು. 
ಉಡುಪಿ

ನಿಷೇಧಿತ ಪ್ಲಾಸ್ಟಿಕ್ ವಶ, ದಂಡ ವಸೂಲಿ

ಇಂದಿರಾ ಎನ್ ಕೆ
ಮೂಲ್ಕಿ: ಮೂಲ್ಕಿ ಕಾರ್ನಾಡು ವಾರದ ಸಂತೆಯಲ್ಲಿ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಚೀಲ ನೀಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್ ಸೂಚನೆಯಂತೆ ಅಧಿಕಾರಿಗಳು ಅಂಗಡಿಗಳಿಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಕೈ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗ್ಗೆ ನಗರ ಪಂಚಾಯಿತಿ ಅಧಿಕಾರಿಗಳು ಶನಿವಾರ ನಡೆಯುವ ಕಾರ್ನಾಡ್ ಸಂತೆಯ ಪ್ರತಿ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಅಂಗಡಿಯ ಮಾಲೀಕರು ನಿಷೇಧಿತ ಪ್ಲಾಸ್ಟಿಕ್ ಕೈ ಚೀಲದಲ್ಲಿ ವಸ್ತುಗಳನ್ನು ಹಾಕಿ ನೀಡುತ್ತಿರುವುದು ಕಂಡುಬಂದಿದೆ. ಅಂಗಡಿ ಮಾಲೀಕರಿಗೆ ದಂಡ ವಿಧಿಸುವುದರ ಜತೆಗೆ ನಿಷೇಧಿತ ಪ್ಲಾಸ್ಟಿಕ್ ಕೈಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಕಂಪನಿಗಳು ಹಾಗೂ ಮಾರಾಟ ಮಾಡುವ ಅಂಗಡಿಗಳನ್ನು ಬಂದ್ ಮಾಡುವುದನ್ನು ಬಿಟ್ಟು ಸಣ್ಣ ವ್ಯಾಪಾರಸ್ಥರ ಮೇಲೆ ಪ್ಲಾಸ್ಟಿಕ್ ನಿಷೇಧ ಎಂದು ದಂಡ ವಿಧಿಸಿ ಸಮಸ್ಯೆ ಮಾಡುತ್ತಿದ್ದಾರೆ ಎಂದು ಸಂತೆ ಮಾರಾಟದ ಅಂಗಡಿಯವರು ಆರೋಪಿಸಿದ್ದಾರೆ.
ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್ ಮಾಹಿತಿ ನೀಡಿ, ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದು ಕೆಲದಿನಗಳ ಹಿಂದೆ ಕಾರ್ನಾಡ್ ವಾರದ ಸಂತೆಯಲ್ಲಿ ಪ್ರತಿ ಅಂಗಡಿಗಳಿಗೆ ಬಟ್ಟೆ ಕೈ ಚೀಲ ವಿತರಿಸಿ ಜಾಗೃತಿ ಮೂಡಿಸಲಾಗಿದೆ. ಸಾರ್ವಜನಿಕರಿಂದ ನಿಷೇಧಿತ ಪ್ಲಾಸ್ಟಿಕ್ ಚೀಲ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.