ಯು.ಬಿ.ಅಯ್ಯಪ್ಪ, ಕೃಷ್ಣಪ್ಪ, ಆದಿಶೇಷ ನಾರಾಯಣ 
ಉಡುಪಿ

ಬಂಗ್ಲೆಗುಡ್ಡೆ ಅಸ್ಥಿಪಂಜರ ರಹಸ್ಯ ಬಯಲು

ವಿಜಯವಾಣಿ ಸುದ್ದಿಜಾಲ ಮಂಗಳೂರು
ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರಗಳ ರಹಸ್ಯ ಕೊನೆಗೂ ಹೊರಬಿದ್ದಿದೆ. ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ನಡೆಸಿದ ಡಿಎನ್‌ಎ ಪರೀಕ್ಷೆಯಿಂದ ಮೂರು ಅಸ್ಥಿಪಂಜರಗಳ ಗುರುತು ಅಧಿಕೃತವಾಗಿ ದೃಢಪಟ್ಟಿದೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ಸಮೀಪದ ಬಂಗ್ಲೆಗುಡ್ಡೆಯಲ್ಲಿ 2025ರ ಸೆ.17 ಮತ್ತು 18ರಂದು ವಿಶೇಷ ತನಿಖಾ ತಂಡ ಅಧಿಕಾರಿಗಳು ನಡೆಸಿದ ಸುದೀರ್ಘ ಶೋಧ ಕಾರ್ಯಾಚರಣೆಯಲ್ಲಿ ಒಟ್ಟು 7 ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಕೆಲವು ಗುರುತಿನ ಚೀಟಿಗಳ ಆಧಾರದ ಮೇಲೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ, ಸಂಬಂಧಪಟ್ಟ ಕುಟುಂಬಸ್ಥರನ್ನು ಪತ್ತೆಹಚ್ಚಿದ್ದರು. ಬಳಿಕ ಬೆಳ್ತಂಗಡಿ ನ್ಯಾಯಾಲಯದ ಮುಖಾಂತರ ಕುಟುಂಬದ ಸದಸ್ಯರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ತಪಾಸಣೆಗಾಗಿ ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಬಂದಿರುವ ವೈಜ್ಞಾನಿಕ ವರದಿಯಲ್ಲಿ ಮೂರು ಕುಟುಂಬಗಳ ಡಿಎನ್‌ಎ ಮಾದರಿ ಪತ್ತೆಯಾದ ಅಸ್ಥಿಪಂಜರಗಳಿಗೆ ತಾಳೆಯಾಗಿದೆ.

ಪತ್ತೆಯಾದವರು ಯಾರು?

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಯು.ಬಿ.ಅಯ್ಯಪ್ಪ(70) 2017ರ ಜೂನ್ 25ರಂದು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿ ನಾಪತ್ತೆಯಾಗಿದ್ದರು. ಈ ಕುರಿತು ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಆದಿಶೇಷ ನಾರಾಯಣ(27) ಬೆಂಗಳೂರಿನ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, 2013ರ ಅ.2ರಂದು ಮನೆಗೆ ಬಂದು ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ. ಪದೇಪದೆ ಮನೆ ಬಿಟ್ಟು ಹೋಗುತ್ತಿದ್ದ ಕಾರಣ ಕುಟುಂಬಸ್ಥರು ಆರಂಭದಲ್ಲಿ ನಾಪತ್ತೆ ದೂರು ನೀಡಿರಲಿಲ್ಲ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ಕೃಷ್ಣಪ್ಪ(85) 2024ರ ಅ.22ರಂದು ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಧರ್ಮಸ್ಥಳ ಆಸುಪಾಸಿನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಎಸ್‌ಐಟಿ ಉತ್ಖನನದ ವೇಳೆ ಪತ್ತೆಯಾದ ಅಸ್ಥಿಪಂಜರಗಳ ಪೈಕಿ ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ದೃಢಪಟ್ಟಿರುವ ಮೂವರೂ ಪುರುಷರು ಎಂಬುದು ಇದೀಗ ತಿಳಿದು ಬಂದಿದೆ.

ಕುಟುಂಬಸ್ಥರಿಗೆ ಹಸ್ತಾಂತರಕ್ಕೆ ಅವಕಾಶ

ಎಸ್‌ಐಟಿ ಅಧಿಕಾರಿಗಳು ಜುಲೈ 15ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ತನಿಖಾ ವರದಿಯಲ್ಲಿ ಈ ಮೂವರ ಡಿಎನ್‌ಎ ದೃಢಪಟ್ಟಿರುವುದನ್ನು ಅಧಿಕೃತವಾಗಿ ಉಲ್ಲೇಖಿಸಿದ್ದಾರೆ. ಸದ್ಯ ಡಿಎನ್‌ಎ ವರದಿ ಆಧಾರದ ಮೇಲೆ ಸಂಬಂಧಪಟ್ಟ ಮೂರು ಕುಟುಂಬದವರು ಕಾನೂನಾತ್ಮಕವಾಗಿ ಎಸ್‌ಐಟಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಅಸ್ಥಿಪಂಜರಗಳ ಶೇಷವನ್ನು ಪಡೆದು ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ.