ಬಂಗ್ಲೆಗುಡ್ಡೆಯಲ್ಲಿರುವ ಅಂಗನವಾಡಿ ಕೇಂದ್ರ.
ಬಂಟ್ವಾಳ: ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಅಂಗನವಾಡಿ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರವನ್ನು ಸ್ಥಳಾಂತರಿಸಲಾಗಿದೆ.
ಈ ಅಂಗನವಾಡಿ ಕೇಂದ್ರದ ಶಿಥಿಲಾವಸ್ಥೆ ಹಾಗೂ ಅವ್ಯವಸ್ಥೆಗಳ ಬಗ್ಗೆ ಈ ಹಿಂದೆಯೇ ಇಲಾಖಾಧಿಕಾರಿಗಳ ಗಮನಕ್ಕೆ ಸ್ಥಳೀಯರು ತಂದಿದ್ದರು. ಬಂಟ್ವಾಳ ಸಿಡಿಪಿಒ ಇಲಾಖೆ ನಿರ್ಲಕ್ಷೃದಿಂದಾಗಿ ಸ್ಥಳೀಯರಿಗೆ ಕಾಲ್ನಡಿಯಲ್ಲಿದ್ದ ಪುಟಾಣಿಗಳ ಕೇಂದ್ರವೊಂದು ಈಗ ದೂರಕ್ಕೆ ಸ್ಥಳಾಂತರಗೊಳ್ಳುವಂಥ ಸ್ಥಿತಿ ಬಂದೊದಗಿದೆ.
ಮಳೆಗಾಲದ ಆರಂಭದಲ್ಲೇ ಅಂಗನವಾಡಿ ಕೇಂದ್ರದ ಗೋಡೆ ಬಿರುಕು ಬಿಟ್ಟಿರುವ ಬಗ್ಗೆ ಕಾರ್ಯಕರ್ತೆಯರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಇದೀಗ ಈ ಅಂಗನವಾಡಿ ಕೇಂದ್ರವನ್ನು ಅರ್ಧ ಕಿ.ಮೀ. ದೂರದ ಪಾಣೆಮಂಗಳೂರು ಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯೊಂದಕ್ಕೆ ಸ್ಥಳಾಂತರಿಸಲಾಗಿದೆ.
ಅಂಗನವಾಡಿ ಕೇಂದ್ರಕ್ಕೆ ಪಾಲಕರು ತಮ್ಮ ಮಕ್ಕಳನ್ನು ಕಾಲ್ನಡಿಗೆಯಲ್ಲೇ ಕರೆ ತರುತ್ತಿದ್ದರು. ಇದೀಗ ಕೇಂದ್ರ ಅರ್ಧ ಕಿ.ಮೀ. ದೂರಕ್ಕೆ ಹೋಗಿರುವುದರಿಂದ ಮಕ್ಕಳನ್ನು ಕರೆ ತರಲು ವಾಹನಗಳ ಮೊರೆ ಹೋಗಬೇಕಾಗಿದೆ. ಇದರಿಂದಾಗಿ ಮಕ್ಕಳ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಬಗ್ಗೆ ಆತಂಕ ಎದುರಾಗಿದೆ.
ಬಂಗ್ಲೆಗುಡ್ಡೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ಕಟ್ಟಡ ಕೂಡ ಈಗಾಗಲೇ ಸಂಪೂರ್ಣ ಶಿಥಿಲಗೊಂಡು ಕುಸಿದು ಬಿದ್ದು ವರ್ಷಗಳೇ ಉರುಳುತ್ತಿವೆ. ಇದರ ಪುನಃ ನಿರ್ಮಾಣದ ಬಗ್ಗೆ ಇನ್ನೂ ಕೂಡಾ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಅದೇ ಸಾಲಿಗೆ ಅಂಗನವಾಡಿ ಕಟ್ಟಡವೂ ಸೇರ್ಪಡೆಗೊಂಡಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.