ಉಡುಪಿಯಿಂದ ಗಡಿಪಾರು ಆದ ಬಾಂಗ್ಲಾದೇಶದ ಅಕ್ರಮ ವಲಸಿಗರು. 
ಉಡುಪಿ

ಉಡುಪಿಯಲ್ಲಿದ್ದ ಬಾಂಗ್ಲಾ ಅಕ್ರಮ ವಲಸಿಗರ ಗಡಿಪಾರು

* 2 ವರ್ಷ ಶಿಕ್ಷೆ, ಬಂಧನದಲ್ಲಿದ್ದ 10 ಆರೋಪಿಗಳು

* ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ ಶಂಕರ ಮಾಹಿತಿ

ಉಡುಪಿ: ಮಲ್ಪೆ ಪೊಲೀಸ್​ ಠಾಣಾ ವ್ಯಾಪ್ತಿಯ ವಡಬಾಂಡೇಶ್ವರ ಬಸ್​ ನಿಲ್ದಾಣದ ಬಳಿ 2024ರ ಅಕ್ಟೋಬರ್​ 11 ರಂದು ಅನುಮಾನಾಸ್ಪದವಾಗಿ ಕಂಡುಬಂದಿದ್ದ ಹಾಗೂ ಬಂಧನಕ್ಕೆ ಒಳಗಾಗಿದ್ದ ಬಾಂಗ್ಲಾ ದೇಶದ ಅಕ್ರಮ 10 ವಲಸಿಗರನ್ನು ಉಡುಪಿ ಜಿಲ್ಲಾ ಪೊಲೀಸ್​ ಇಲಾಖೆ ಗಡಿಪಾರು ಮಾಡಿದೆ.

ಮಹಮ್ಮದ್​ ಅಬ್ದುಲ್​ ಅಕೀಮ್​, ಮಹಮ್ಮದ್​ ಸುಜಾನ್​ ಹುಸೇನ್​, ಮಹಮ್ಮದ್​ ಇಸ್ಮೈಲ್​ ಹಕ್​, ಮಹಮ್ಮದ್​ ಅಬ್ದುಲ್​ ಕರೀಂ, ಮಹಮ್ಮದ್​ ಅಬ್ದುಲ್​ ಸಲಾಂ, ಮಹಮ್ಮದ್​ ರಾಜಿಕುಲಾ ಇಸ್ಲಾಮ್​, ಮಹಮ್ಮದ್​ ಸೀಜಿಬ್​ ಅಲ್ಲಂ ಅಲಿ, ಮಹಮ್ಮದ್​ ಇಮಾಮ್​ ಶೇಖ್​, ಮಹಮ್ಮದ್​ ರಿಮೂಲ್​ ಇಸ್ಲಾಂ, ಮಹಮ್ಮದ್​ ಜಹಾಂಗೀರ್​ ಅಲಂ ಗಡಿಪಾರು ಆಗಲಿರುವ ಅಕ್ರಮ ವಲಸಿಗರು.

ಅಂದು ಪ್ರಕರಣದ ವಿಚಾರಣೆ ನಡೆಸಿದ್ದ ಉಡುಪಿ ನ್ಯಾಯಾಲಯವು ಬಾಂಗ್ಲಾದೇಶದಿಂದ ಬಂದಿದ್ದ 10 ಮಂದಿ ಅಕ್ರಮ ವಲಸಿಗರಿಗೆ 2 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು. ಬಂಧಿತರನ್ನು ಉಡುಪಿ ಜಿಲ್ಲಾ ಕಾರಾಗೃಹ ಹಾಗೂ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು.

ಕಳೆದ ಅ.10ರಂದು ಅವರಿಗೆ ವಿಧಿಸಿದ್ದ ಶಿಕ್ಷೆ ಅವಧಿ ಮುಗಿದಿದ್ದರಿಂದ ಬಾಂಗ್ಲಾ ದೇಶಕ್ಕೆ ಗಡಿಪಾರು ಪ್ರಕ್ರಿಯೆ ನಡೆಸುವಂತೆ ಭಾರತದ ಗೃಹ ಸಚಿವಾಲಯ ಮತ್ತು ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಾಧಿಕಾರಿ ಆದೇಶ ಹೊರಡಿಸಿದ್ದರು.

ಬಂಧಿತ ಬಾಂಗ್ಲಾ ವಲಸಿಗರನ್ನು ಬೆಂಗಳೂರಿನಿಂದ ರೈಲಿನಲ್ಲಿ ಕರೆದುಕೊಂಡು ಹೋಗಲಾಗಿದ್ದು, ಪಶ್ಚಿಮ ಬಂಗಾಲದ ಮಾಲ್ಡಾದಲ್ಲಿರುವ ಬಿಎಸ್​ಎಫ್ ಕಮಾಂಡೆಂಟ್​ ಮತ್ತು ನೋಡಲ್​ ಅಧಿಕಾರಿಯ ಮುಂದೆ ಹಾಜರುಪಡಿಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಮಲ್ಪೆ ಠಾಣೆಯ ವೃತ್ತ ನಿರೀಕ್ಷಕ ರಾಮಚಂದ್ರ ನಾಯ್ಕ, ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಉಡುಪಿಯಿಂದ ತೆರಳಿದ್ದಾರೆ.

ಜಿಲ್ಲಾ ವಿದೇಶಿಯರ ನೋಂದಣಾಧಿಕಾರಿ ಮಾರ್ಗದರ್ಶನಲ್ಲಿ ನಡೆದ ಪ್ರಕ್ರಿಯೆಯಲ್ಲಿ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್​ ನಿರೀಕ್ಷಕ ಹರೀಶ ಆರ್​., ಎಎಸ್​ಐ ಪ್ರದೀಪ, ಅಮರಕುಮಾರ್​ ಮತ್ತು ಮೈತ್ರಿ ಹಾಗೂ ಟ್ರಾಫಿಕ್​ ಪಿಎಸ್​ಐ ಹುಸೇನ್​ ಸಾಬ್​ ಸಹಕರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ ಶಂಕರ ಮಾಹಿತಿ ನೀಡಿದ್ದಾರೆ.