ಶಾಸಕ ಯಶ್ಪಾಲ್​ ಸುವರ್ಣ ಹಾಗೂ ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಉದ್ಘಾಟಿಸಿದರು.  
ಉಡುಪಿ

ಬಡಗಬೆಟ್ಟು ಸೊಸೈಟಿಗೆ 15.09 ಕೋಟಿ ರೂ. ನಿವ್ವಳ ಲಾಭ

ಉಡುಪಿ: ಬಡಗಬೆಟ್ಟು ಕ್ರೆಡಿಟ್​ ಕೋ-&ಆಪರೇಟಿವ್​ ಸೊಸೈಟಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು ರೂ.4,089 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, 658.80 ಕೋಟಿ ರೂ.ಠೇವಣಿ ಹಾಗೂ 533.96 ಕೋಟಿ ರೂ. ಹೊರಬಾಕಿ ಸಾಲ ಹೊಂದಿದೆ. ರೂ.15.09 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್​ ಘೋಷಿಸಲಾಗಿದೆ ಎಂದು ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಬಡಗಬೆಟ್ಟು ಕ್ರೆಡಿಟ್​ ಕೋ-&ಆಪರೇಟಿವ್​ ಸೊಸೈಟಿ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಬ್ಯಾಂಕಿಂಗ್​ ವ್ಯವಹಾರಕ್ಕೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ನೀಡುತ್ತಿದ್ದು, ವಾರ್ಷಿಕವಾಗಿ ಸುಮಾರು30 ಲಕ್ಷ ರೂ. ಶಿಕ್ಷಣ, ಆರೋಗ್ಯ, ಸಾಂಸತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದೆ ಎಂದು ತಿಳಿಸಿದರು.

ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್​ ವಿ. ಶೇರಿಗಾರ್​ ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿ, ಸಂಘದ ಡಿಜಿಟಲೀಕರಣದ ಭಾಗವಾಗಿ ಚೇತನಾ ಮೊಬೈಲ್​ ಆ್ಯಪ್​ ಮೂಲಕ ಸುರಕ್ಷಿತ ಮೊಬೈಲ್​ ಬ್ಯಾಂಕಿಂಗ್​ ಸೇವೆ ಒದಗಿಸಲಾಗುತ್ತಿದೆ. ದೈನಿಕ ಠೇವಣಿ ಸಂಗ್ರಹಣೆಯನ್ನೂ ಪಿಗ್ಮಿ ಮೊಬೈಲ್​ ಆ್ಯಪ್​ ಮೂಲಕ ನಡೆಸಲಾಗುತ್ತಿದೆ ಎಂದರು.

ಸದಸ್ಯರ ಅನುಕೂಲಕ್ಕಾಗಿ ಆರ್​ಟಿಜಿಎಸ್​ ಸೌಲಭ್ಯ, ಉಚಿತ ಮಿಸ್ಡ್​ ಕಾಲ್​ ಸೇವೆ, ಉಚಿತ ಎಸ್​ಎಂಎಸ್​ ಸೇವೆ, ಸೇಫ್​ ಲಾಕರ್​, ಇ-ಸ್ಟಾಂಪಿಂಗ್​, ಪಾನ್​ ಕಾರ್ಡ್​, ವೆಸ್ಟರ್ನ್​ ಯೂನಿಯನ್​ ಮನಿ ಟ್ರಾನ್ಸ್​ಫರ್​, ಲಂಬಾರ್ಡ್​ ಆರೋಗ್ಯ ಕಾರ್ಡ್​, ಮಣಿಪಾಲ ಆರೋಗ್ಯ ಕಾರ್ಡ್​ ಹಾಗೂ ಎಲ್ಲಾ ರೀತಿಯ ವಿಮಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಫ್ಯಾಶನ್​ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಬಾಲಪ್ರತಿಭೆ ಸಚಿತ ರಾವ್​, ಮಿಸ್​ ಯೂನಿವರ್ಸ್​ ಇಂಡಿಯಾ ಸ್ಪರ್ಧೆಯ ಉಡುಪಿಯನ್ನು ಪ್ರತಿನಿಧಿಸಿದ ಮೊದಲ ಯುವತಿ ಸ್ಫೂರ್ತಿ ಡಿ. ಶೆಟ್ಟಿ, ಸತತ 25 ಗಂಟೆಗಳ ಕಾಲ 200ಕ್ಕೂ ಅಧಿಕ ದಾಸರ ಪದಗಳನ್ನು ಪ್ರಸ್ತುತಪಡಿಸಿ ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ ವಿಶ್ವದಾಖಲೆ ಮಾಡಿದ ವಿದುಷಿ ಸಂಗೀತ ಬಾಲಚಂದ್ರ, ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕುತ್ತಿರುವ ಸುಗುಣಾ ಪೈ ಟಿ., ಹಾಗೂ ಪವರ್​ಲಿಫ್ಟಿಂಗ್​ನಲ್ಲಿ ದಕ್ಷಿಣ ಭಾರತ ಮಟ್ಟದಲ್ಲಿ ಸಾಧನೆ ಮಾಡಿದ ಆ್ಯನ್ನಿ ಲಿಸಾ ಅಮ್ಮನ್ನ ಅವರನ್ನು ಗೌರವಿಸಲಾಯಿತು. ಸಂಘದ ಮಲ್ಪೆ ಶಾಖೆಯಲ್ಲಿ ಸುಮಾರು 11 ವರ್ಷಗಳ ಕಾಲ ದೈನಿಕ ಠೇವಣಿ ಸಂಗ್ರಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗೋವಿಂದಾಸ್​ ಕೆ. ಸುವರ್ಣ ಹಾಗೂ ಅಂಬಾಗಿಲು ಶಾಖೆಯಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ವೆಂಕಟರಮಣ ಭಟ್​ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಯಶ್ಪಾಲ್​ ಸುವರ್ಣ ಹಾಗೂ ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಸಂಘದ ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್​, ಎಲ್​. ಉಮಾನಾಥ, ಹಾಜಿ ಸಯ್ಯದ್​ ಅಬ್ದುಲ್​ ರಜಾಕ್​, ವಿನಯ ಕುಮಾರ್​ ಟಿ.ಎ., ಪದ್ಮನಾಭ ಕೆ. ನಾಯಕ್​, ಸದಾಶಿವ ನಾಯ್ಕ್​, ಮನೋಹರ್​ ಎಸ್​. ಶೆಟ್ಟಿ, ಸಾಧು ಸಾಲ್ಯಾನ್​, ಜಯಾ ಶೆಟ್ಟಿ, ಗಾಯತ್ರ್ರಿ ಎಸ್​. ಭಟ್​ ಉಪಸ್ಥಿತರಿದ್ದರು. ಸಂಘದ ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್​ ಕೆ. ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವಿಣ್​ ಕುಮಾರ್​ ವಂದಿಸಿದರು.