ಉಡುಪಿಯ ಹಾವಂಜೆಯಲ್ಲಿ ಆಯೋಜಿಸಿದ್ದ 'ಬಾಲ ಲೀಲಾ' ಚಿಣ್ಣರ ಬೇಸಿಗೆ ಶಿಬಿರವನ್ನು ಅರವಿಂದ ಕುಡ್ಲ ಉದ್ಘಾಟಿಸಿದರು. ಗಣೇಶ್ ಉರಾಳ, ಹಾವಂಜೆ ಮಂಜುನಾಥ್ ರಾವ್, ವಿಶುರಾವ್ ಹಾವಂಜೆ, ವಿದುಷಿ ಅಕ್ಷತಾ ವಿಶು ರಾವ್, ಡಾ. ಜನಾರ್ದನ್ ರಾವ್ ಹಾವಂಜೆ ಇದ್ದರು.
* ಶಿಕ್ಷಕ, ಪಕ್ಷಿತಜ್ಞ ಅರವಿಂದ ಕುಡ್ಲ ಅನಿಸಿಕೆ
* 'ಬಾಲ ಲೀಲಾ' ಸಮ್ಮರ್ ಕ್ಯಾಂಪ್ ಉದ್ಘಾಟನೆ
ಉಡುಪಿ: ಇಂದಿನ ಆಧುನಿಕ ಜೀವನದ ನಡುವೆ ಸಾಂಪ್ರದಾಯಿಕ ಮೌಲ್ಯ ಎತ್ತಿ ಹಿಡಿಯುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿರುವ ಚಿಣ್ಣರಿಗಾಗಿ ಆಯೋಜಿಸಿರುವ ಈ ಶಿಬಿರ ಮಹತ್ವದ್ದಾಗಿದೆ. ಇಂತಹ ಶಿಬಿರಗಳು ಮಕ್ಕಳಲ್ಲಿ ಸಂವಹನದ ತಿಳಿವಳಿಕೆ ಹೆಚ್ಚಿಸುತ್ತದೆ. ಅತ್ಯಂತ ವಿಶಿಷ್ಟವಾಗಿ ಕಲೆ, ಅಭಿನಯ, ಸಂಗೀತ ಎಲ್ಲವನ್ನೂ ಇಲ್ಲಿ ಸಮೀಕರಿಸಿರುವುದು ಶ್ಲಾಘನೀಯ ಎಂದು ಮೂಡಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಪಕ್ಷಿತಜ್ಞ ಅರವಿಂದ ಕುಡ್ಲ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾವನಾ ಫೌಂಡೇಷನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಹಾವಂಜೆಯ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಂಯೋಜಿಸಿದ್ದ 4 ದಿನಗಳ 'ಬಾಲ ಲೀಲಾ' ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಎಂಐಟಿ. ಆರ್ಕಿಟೆಕ್ಚರ್ ವಿಭಾಗದ ಉಪನ್ಯಾಸಕ ಗಣೇಶ್ ಉರಾಳ, ಭಾವನಾ ಫೌಂಡೇಷನ್ನ ಸ್ಥಾಪಕಾಧ್ಯಕ್ಷ ಯಕ್ಷಗುರು ಹಾವಂಜೆ ಮಂಜುನಾಥ್ ರಾವ್, ವಿಶುರಾವ್ ಹಾವಂಜೆ, ವಿದುಷಿ ಅಕ್ಷತಾ ವಿಶು ರಾವ್ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ, ಖ್ಯಾತ ಕಾವಿ ಕಲಾವಿದ ಡಾ. ಜನಾರ್ದನ್ ರಾವ್ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು.
ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರವನ್ನು ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಹಾಗೂ ಕಸವನ್ನು ರಸವಾಗಿಸುವ ಉದ್ದೇಶದೊಂದಿಗೆ ರೂಪಿಸಲಾಗಿದೆ. ಅಭಿನಯ, ಆವೆಮಣ್ಣಿನ ಶಿಲ್ಪ, ಕಾವಿ ಕಲೆ, ಪಕ್ಷಿ ವೀಕ್ಷಣೆ, ಮನೆಮದ್ದು, ಗ್ರಾಮೀಣ ಆಟಗಳು, ಸಂಗೀತ, ಬಟ್ಟೆಯ ಮೇಲೆ ಮುದ್ರಣ ಕಲೆ ಹೀಗೆ ಹಲವಾರು ಪ್ರಕಾರಗಳನ್ನು ಕಲಿಸಲಾಗುವುದು.
— ಡಾ. ಜನಾರ್ದನ್ ರಾವ್ ಹಾವಂಜೆ. ಖ್ಯಾತ ಕಾವಿ ಕಲಾವಿದ.