ವಿದ್ಯುತ್ ಆಘಾತದಿಂದ ಕೃಷ್ಣಪ್ಪ ಕುಲಾಲ್ ಮೃತಪಟ್ಟ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿರುವುದು.  
ಉಡುಪಿ

ಬಿ.ಮೂಡ ಗ್ರಾಮದ 110 ಕೆವಿ ಮಾರ್ಗ ಅಸುರಕ್ಷಿತ

ಬಂಟ್ವಾಳ: ಬಿ.ಮೂಡ ಗ್ರಾಮದ ರಾಜೀವಪಲ್ಕೆ ಪ್ರದೇಶದಲ್ಲಿ ಹಾದು ಹೋಗಿರುವ 110 ಕೆವಿ ವಿದ್ಯುತ್ ಮಾರ್ಗ ಅಪಾಯಕಾರಿಯಾಗಿದ್ದು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಸೊಪ್ಪು ತರಲೆಂದು ತೆರಳಿದ್ದ ಇಲ್ಲಿನ ನಿವಾಸಿ ಕೃಷ್ಣಪ್ಪ ಕುಲಾಲ್ ಅವರಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿ ಅಪಾಯಕಾರಿ ವಿದ್ಯುತ್ ಲೈನ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಶಂಭೂರು ಎ.ಎಂ.ಆರ್. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಂಟ್ವಾಳ ಶವಾಗಾರ ಹಾಗೂ ಘಟನಾ ಸ್ಥಳದಲ್ಲಿ ನೆರೆದ ಸಂಬಂಧಿಕರು ಹಾಗೂ ಗ್ರಾಮಸ್ಥರು, ವಿದ್ಯುತ್ ಮಾರ್ಗ ಅಳವಡಿಸುವಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿಲ್ಲ. ಮುಂದೆಯೂ ಈ ಸ್ಥಳದಲ್ಲಿ ಅಪಾಯಕಾರಿ ಪರಿಸ್ಥಿತಿ ಇದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ಹಾಗೂ ಮುಂಜಾಗ್ರತಾ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು. ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಬಂಟ್ವಾಳ ನಗರ ಠಾಣೆ ಇನ್‌ಸ್ಪೆಕ್ಟರ್ ಅನಂತಪದ್ಮನಾಭ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಪ್ರಕರಣದ ಕುರಿತು ಕಾನೂನುಬದ್ಧ ತನಿಖೆ ನಡೆಸಿಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೆಸ್ಕಾಂ ಹಾಗೂ ಎ.ಎಂ.ಆರ್. ಅಧಿಕಾರಿಗಳು ಬುಧವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮಾನುಸಾರ ಮೃತರ ಕುಟುಂಬಕ್ಕೆ ದೊರೆಯಬೇಕಾದ ಪರಿಹಾರ ಕಲ್ಪಿಸುವಂತೆ ಶಾಸಕ ರಾಜೇಶ್ ನಾಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.