ಉಡುಪಿಯಲ್ಲಿ ಆಯೋಜಿಸಿದ್ದ ಮುನಿಯಾಲು ಆಯುರ್ವೇದ ಕಾಲೇಜ್​ನ ಘಟಿಕೋತ್ಸವವನ್ನು ಡಾ. ಎಂ.ಮೋಹನ ಆಳ್ವ ಉದ್ಘಾಟಿಸಿದರು. ಡಾ. ವಿಜಯಭಾನು ಶೆಟ್ಟಿ, ಡಾ. ಸತ್ಯನಾರಾಯಣ ಭಟ್​ ಇದ್ದರು. 
ಉಡುಪಿ

ಆಯುರ್ವೇದದ ತಜ್ಞರಿಗಿದೆ ಅಪೂರ್ವ ಅವಕಾಶ

* ಆಳ್ವಾಸ್​ ಎಜುಕೇಷನ್​ ಟ್ರಸ್ಟ್​ನ ಡಾ. ಎಂ.ಮೋಹನ ಆಳ್ವ ಅಭಿಪ್ರಾಯ

* ಮುನಿಯಾಲು ಕಾಲೇಜ್​ನ ಘಟಿಕೋತ್ಸವ ಉದ್ಘಾಟನೆ

ಉಡುಪಿ: ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಅಪಾರವಾಗಿ ಔಷಧ ಪರಿಹಾರಗಳಿವೆ. ಜನರ ಜೀವನ ಶೈಲಿ ಸುಧಾರಣೆಯಲ್ಲಿ ಆಯುರ್ವೇದ ತಜ್ಞರಿಗೆ ಅಪೂರ್ವ ಅವಕಾಶವೂ ಇದೆ. ವಿಶ್ವದ 17 ರಾಷ್ಟ್ರಗಳು ಆಯುರ್ವೇದ ಚಿಕಿತ್ಸೆ ಅಳವಡಿಕೆಗೆ ಒಪ್ಪಿಕೊಂಡಿವೆ. ಆಯುರ್ವೇದ ಕ್ಷೇತ್ರಕ್ಕೆ ಕೇಂದ್ರದ ಬಜೆಟ್​ 300 ಕೋಟಿಯಿಂದ 3 ಸಾವಿರ ಕೋಟಿ ರೂ.ಗೆ ಏರಿದೆ. ಸಂಶೋಧನೆಗೆ ಒತ್ತು ನೀಡಲಾಗುತ್ತಿದ್ದು ಸಚಿವಾಲಯವನ್ನೂ ಹೊಂದಿರುವ ಆಯುರ್ವೇದವನ್ನು ಕ್ಷುಲ್ಲಕವಾಗಿ ಪರಿಗಣಿಸದೆ ಅದರ ಮಹತ್ವ ಅರಿತುಕೊಳ್ಳಬೇಕು ಎಂದು ಮೂಡಬಿದಿರೆಯ ಆಳ್ವಾಸ್​ ಎಜುಕೇಷನ್​ ಟ್ರಸ್ಟ್​ನ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಕಿವಿಮಾತು ಹೇಳಿದರು.

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಡಾ.ಯು. ಕೃಷ್ಣ ಮುನಿಯಾಲು ಸ್ಮಾರಕ ಪ್ರತಿಷ್ಠಾನ ಅಧೀನದ ಮುನಿಯಾಲು ಇನ್​ಸ್ಟಿಟ್ಯೂಟ್​ ಆಫ್​ ಆಯುರ್ವೇದ ಮೆಡಿಕಲ್​ ಸೈನ್ಸಸ್​, ಮುನಿಯಾಲು ಇನ್​ಸ್ಟಿಟ್ಯೂಟ್​ ಆಫ್​ ಯೋಗ ಆ್ಯಂಡ್​ ನ್ಯಾಚುರೋಪಥಿ ವತಿಯಿಂದ ಗುರುವಾರ (ಅ.29) ಆಯೋಜಿಸಿದ್ದ ಘಟಿಕೋತ್ಸವ, ವಿದ್ಯಾರ್ಥಿ ಸಂಘ ಹಾಗೂ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮಾನವೀಯ ಭಾವವಿರಲಿ

ದೇಶದಲ್ಲಿ 800, ರಾಜ್ಯದಲ್ಲಿ 104 ಆಯುರ್ವೇದ ಕಾಲೇಜ್​ಗಳಿವೆ. ನೀವು ಗಳಿಸಿದ ಆಯುರ್ವೇದ ಪದವಿ, ವೃತ್ತಿಯನ್ನು ಇನ್ನೊಂದು ವೃತ್ತಿಗೆ ಹೋಲಿಸಬಾರದು. ಯಂತ್ರಕ್ಕಿಂತ ಹೆಚ್ಚಾಗಿ ಜನರೊಂದಿಗಿನ ವ್ಯವಹಾರ, ಕಲಿಕೆಯಿಂದ ಹೊಸ ಜ್ಞಾನ, ಅನುಭವ ಲಭಿಸುತ್ತದೆ. ಆಯುರ್ವೇದ ಶಿಕ್ಷಣದ ಗುಣಮಟ್ಟ ಸುಧಾರಿಸಿದ್ದು, ಜನರ ಜೀವ ಉಳಿಸುವ ಕೆಲಸ ನಿಮ್ಮಿಂದ ಆಗಬೇಕು. ಕರುಣೆ, ಮಾನವೀಯತೆ, ಸೇವಾ ಮನೋಭಾವದಿಂದ ವೃತ್ತಿ ನಿರತರಾದರೆ ವೈದ್ಯ ಹುದ್ದೆಯಲ್ಲಿ ಉನ್ನತಿ ಹೊಂದಲು ಸಾಧ್ಯ. ಸೌಂದರ್ಯ ತಜ್ಞೆಯರು ನೈಸರ್ಗಿಕ ಹಾಗೂ ಗಿಡಮೂಲಿಕೆಗಳ ಆಧಾರದಲ್ಲಿ ಸ್ಟಾರ್ಟಪ್​ ಆರಂಭಿಸಬಹುದು ಎಂದರು.

ಮುನಿಯಾಲು ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯಭಾನು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುನಿಯಾಲು ಆಯುರ್ವೇದ ಕಾಲೇಜ್​ನ ಪ್ರಿನ್ಸಿಪಾಲ್​ ಡಾ. ಸತ್ಯನಾರಾಯಣ ಭಟ್​ ಹಾಗೂ ಯೋಗ ಆ್ಯಂಡ್​ ನ್ಯಾಚುರೋಪಥಿ ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಾಂಶುಪಾಲೆ ಡಾ. ಅಪರ್ಣಾ ಸುರೇಂದ್ರ ಮಂಡಿಸಿದರು. ಸಂಸ್ಥೆಯ ನಿರ್ದೇಶಕಿ ಡಾ. ಶ್ರದ್ಧಾ ಶೆಟ್ಟಿ ಅಧ್ಯಕ್ಷೀಯ ಭಾಷಣ ಮಾಡಿದರು.

ಸ್ಕಂದಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿದ್ವಾನ್​ ಹೆರ್ಗ ಹರಿಪ್ರಸಾದ್​ ಭಟ್​ ಸ್ವಾಗತಿಸಿದರು. ಡಾ. ಶ್ರದ್ಧಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗುರುರಾಜ ತಂತ್ರಿ ಪರಿಚಯಿಸಿದರು. ಡಾ. ಧನ್ಯಾ ಮತ್ತು ಡಾ.ಮಾನಸಾ ಕಾರ್ಯಕ್ರಮ ನಿರೂಪಿಸಿದರು. ಡಾ. ಸುರೇಶ ಭಟ್​ ವಂದಿಸಿದರು.

117 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಆಯುರ್ವೇದದ 103 ವಿದ್ಯಾರ್ಥಿಗಳು, ಸ್ನಾತಕೋತ್ತರದ 12 ಹಾಗೂ ಬಿಎನ್​ವೈಎಸ್​ನ 2 ಸೇರಿ ಒಟ್ಟು 117 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರೋಗನಿದಾನ ವಿಭಾಗದ ಪ್ರಾಧ್ಯಾಪಕ ಡಾ. ರವಿಶಂಕರ ಶೆಣೈ, ಕಾಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಪ್ರಮೋದ ಶೇಟ್​, ರಚನಾ ಶರೀರ ವಿಭಾಗದ ಪ್ರಾಧ್ಯಾಪಕಿ ಡಾ. ಪ್ರೀತಿ ಪಾಟೀಲ, ಯೋಗ ಆ್ಯಂಡ್​ ನ್ಯಾಚುರೋಪಥಿ ಸಂಸ್ಥೆಯ ಪ್ರಾಧ್ಯಾಪಕಿ ಡಾ. ಶುಭಾ ಉಡಪುಡಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಮುನಿಯಾಲು ಸಮೂಹ ಸಂಸ್ಥೆಯು ಔಷಧಧ ನೆಲೆಯಲ್ಲಿ ಅಮೆರಿಕದ 17 ಪೇಟೆಂಟ್​ ಪಡೆದಿದ್ದು, ಭಾರತೀಯ ಮೂಲದ 8 ಪೇಟೆಂಟ್​ ದೊರೆತಿದೆ. ಇನ್ನೂ 9 ಪೇಟೆಂಟ್​ ಪಡೆದುಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ವಿದ್ಯಾರ್ಥಿ ಪರಿಷತ್​ ಉದ್ಘಾಟನೆ

ಮಧ್ಯಾಹ್ನ ನಡೆದ ವಿದ್ಯಾರ್ಥಿ ಪರಿಷತ್​ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಶ್ಮಿ ಕಲ್ಕುರ ಉಸ್ತುವಾರಿ ವಹಿಸಿದ್ದರು. ಶಲ್ಯತಂತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಜಕಿರಣ ಸಂಯೋಜಿಸಿದರು. ಗೌತಮ ಡಿ.ಕೆ. ಹಾಗೂ ನೂತನ ವಿದ್ಯಾರ್ಥಿ ಪರಿಷತ್​ನ ತಂಡವು ಅಧಿಕೃತ ಜವಾಬ್ದಾರಿ ಸ್ವೀಕರಿಸಿತು. ದ್ರವ್ಯಗುಣ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅರ್ಚನಾ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕತಿಕ ಕಾರ್ಯದರ್ಶಿ ನಿಧಿ ಪ್ರಿಯದರ್ಶಿನಿ ಸ್ವಾಗತಿಸಿದರು. ತಾಂತ್ರಿಕ ಕಾರ್ಯದರ್ಶಿ ತೇಜಸ್​ ಕೆ.ಸಿ. ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.