ಪೇಜಾವರ ಶ್ರೀ  
ಉಡುಪಿ

ರಾಮ ಮಂದಿರ ದೇಣಿಗೆ ಅವ್ಯವಹಾರ ಆರೋಪ: ಜುಲೈ 11ರ ಟ್ರಸ್ಟ್ ಸಭೆಯಲ್ಲಿ ಚರ್ಚೆ; ಪೇಜಾವರ ಶ್ರೀ ಸ್ಪಷ್ಟನೆ

ಉಡುಪಿ : ರಾಮಮಂದಿರದಲ್ಲಿ ದೇಣೀಗೆ ದುರ್ಬಳಕೆ ಬಗ್ಗೆ ಜುಲೈ 11ರಂದು ನಡೆಯುವ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್​ ಐಟಿ ತನಿಖೆ ನಡೆಸುತ್ತಿರುವುದು ಸ್ವಾಗತ ಅರ್ಹ ಬೆಳವಣಿಗೆ. ದೇಶ ವಿದೇಶದ ಸಮಸ್ತ ಶ್ರದ್ದಾಳುಗಳ ಕೇಂದ್ರ ರಾಮಮಂದಿರ. ಇಂತಹ ಕೇಂದ್ರದಲ್ಲಿ ಇಂತಹ ಘೋರ ಅಪಚಾರ ನಡೆಯಬಾರದು. ನಡೆದದ್ದು ಹೌದಾದರೆ ಖಂಡಿತ ಶಿಕ್ಷೆ ಆಗಬೇಕು.
ಸತ್ಯ ಸತ್ಯತೆ ಶೀಘ್ರವಾಗಿ ಹೊರಬರಬೇಕು. ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಇದೆ. ಚೆನ್ನಾಗಿ ತನಿಖೆ ನಡೆಯಲಿದೆ ಎಂದು ಹೇಳಿದರು.
ಸಿಂಧಿ ಸಮುದಾಯದ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, 200 ಕೆ.ಜಿ ಬೆಳ್ಳಿ ನೀಡಿದವರು ಅಲ್ಲಿಯೇ ರಶೀದಿ ತೆಗೆದುಕೊಳ್ಳಬೇಕು. ದೇಣಿಗೆ ನೀಡುವವರು ಮತ್ತು ಪಡೆದವರು ಇಬ್ಬರಿಗೂ ಜವಾಬ್ದಾರಿ ಇದೆ. ಕೇವಲ ಬಾಯಿ ಮಾತಿನ ಹೇಳಿಕೆಗಳು ಉಳಿಯಬಾರದು. ಅವರು ಆರೋಪ ಮಾಡಿದ್ದರೆ ವಾಸ್ತವ ಇರಬಹುದು. ಆದರೆ ರಶೀದಿ ಕೊಟ್ಟಿಲ್ಲ ಅನ್ನೋ ಮಾತು ನಂಬಲು ಆಗಲ್ಲ ಎಂದರು.
-------
ಚಂಪತ್​ ರಾಯ್​ ರಾಜೀನಾಮೆ ವಿಚಾರ
ಟ್ರಸ್ಟ್​ ವಾಟ್ಸಪ್​ ಗ್ರೂಪಿನಲ್ಲಿ ಯಾವುದೇ ಸಂದೇಶ ಕಳುಹಿಸಿಲ್ಲ. ಈ ತರದ ವಿಷಯಗಳಿದ್ದಾಗ ಅವರು ಸಂದೇಶ ಕಳುಹಿಸುತ್ತಿದ್ದರು. ಅಲ್ಲಿ ಏನು ಬೆಳವಣಿಗೆ ಆಗಿದೆ ಗೊತ್ತಿಲ್ಲ. ವಿವಾದಾತೀತ ವ್ಯವಸ್ಥೆ ಯಾವುದು ಉಳಿದಿಲ್ಲ. ವಿವಾದ ಇರುವುದು ಸಹಜ ವಾಸ್ತವ ಎಷ್ಟು ಮತ್ತು ಅವಾಸ್ತವ ಎಷ್ಟು ಎಂಬುದನ್ನು ತಿಳಿಯಬೇಕು ಎಂದರು.
ಸಮಾಜಸೇವೆ ಮಾಡಿ
ಮಂದಿರಕ್ಕೆ ಹಣ ಹಾಕೊದರ ಬದಲು ಬಡವರಿಗೆ ಮನೆ ಕಟ್ಟಿಸಿ ಕೊಡಿ ಎಂದು ಕರೆ ನೀಡಿದ್ದೆವು. ಬಡವರಿಗೆ ಮನೆ ಕಟ್ಟಿ ಕೊಡುವುದು, ದು@ಖಿತರಿಗೆ ಸಹಾಯ ಮಾಡುವುದು ರಾಮದೇವರ ಸೇವೆ. ಅವಕಾಶ ವಂಚಿತರಿಗೆ ದೀನ ದಲಿತರಿಗೆ ಮನೆ ಕಟ್ಟಿಸಿ ಕೊಡಬಹುದು. ಉದ್ಯೋಗದ ಜೊತೆ ಸಮಾಜ ಸೇವೆ ಮಾಡಲು ಅನೇಕ ಅವಕಾಶಗಳಿವೆ ಆ ಮೂಲಕ ರಾಮಸೇವೆ ಮಾಡಬಹುದು. ಒಳ್ಳೆಯ ಕೆಲಸ ಮಾಡಿ ದೇವರಿಗೆ ಸಮರ್ಪಿಸಬಹುದು. ನೂರು ಕೆಜಿ ಬೆಳ್ಳಿ ಕೊಡುವುದರ ಬದಲು 1000 ಮನೆ ನಿಮಾರ್ಣ ಮಾಡಬೇಕು ಎಂದು ಶ್ರೀಗಳು ತಿಳಿಸಿದರು.