ಅರೆಶಿರೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಸುಕೇಶ ಶೆಟ್ಟಿ ಹೊಸಮಠ ಉದ್ಘಾಟಿಸಿದರು. ಪ್ರಮುಖರಾದ ಸುಕೇಶ ಶೆಟ್ಟಿ ಹೊಸಮಠ, ದಿನಕರ ನಾಯ್ಕ ಬಿ., ಲಕ್ಷ್ಮೀ, ಸಾಧನ್ ಉಪಸ್ಥಿತರಿದ್ದರು.  
ಉಡುಪಿ

ಪಾಠ ಪ್ರವಚನಗಳೊಂದಿಗೆ ಸಂಸ್ಕಾರದ ಅರಿವು

ಬೈಂದೂರು: ವಿದ್ಯಾರ್ಥಿಗಳು ಬಾಲ್ಯದಲ್ಲಿ ಶಿಸ್ತು, ಸಂಯಮ ಹಾಗೂ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳ ನಡುವೆ ಸಂಸ್ಕೃತಿ ಸಂಸ್ಕಾರದ ಅರಿವು, ದೇಶಭಕ್ತಿಯ ಶಿಕ್ಷಣ ನೀಡಬೇಕು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ ಶೆಟ್ಟಿ ಹೊಸಮಠ ಹೇಳಿದರು.
ಗೋಳಿಹೊಳೆ ಗ್ರಾಮದ ಅರೆಶಿರೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯ 2026-27ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ, ದೇವಳದಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿರುವ ಪಠ್ಯ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಮುಖ್ಯಶಿಕ್ಷಕ ದಿನಕರ ನಾಯ್ಕ ಬಿ., ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು. ಅರೆಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲಕ್ಷ್ಮೀ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಶಾಲಾ ಮುಖ್ಯಮಂತ್ರಿ ಸಾಧನ್ ಉಪಸ್ಥಿತರಿದ್ದರು.
20 ವರ್ಷಕ್ಕೂ ಹೆಚ್ಚು ಕಾಲ ಅಡುಗೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ ನಾಗು ಗೌಡ್ತಿ ಹಾಗೂ ಸವಿತಾ ಪೈ ಅವರನ್ನು ಶಾಲೆಯ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ಶೆಟ್ಟಿ ಪ್ರಸ್ತಾವನೆಗೈದರು. ಭಾಸ್ಕರ್ ಭಟ್ ಸ್ವಾಗತಿಸಿದರು. ರತ್ನಾಕರ ದೇವಾಡಿಗ ನಿರೂಪಿಸಿದರು. ಉದಯ ನಾಯ್ಕ ವಂದಿಸಿದರು.