ಉಡುಪಿ

ಜಿಲ್ಲಾ ಮುಸ್ಲಿಮ್​ ಒಕ್ಕೂಟದ ಮಾನವ ರತ್ನ ಪ್ರಶಸ್ತಿಗೆ ನಟ ಪ್ರಕಾಶ್​ರಾಜ್​ ಆಯ್ಕೆ

ಉಡುಪಿ ಜಿಲ್ಲಾ ಮುಸ್ಲಿಮ್​ ಒಕ್ಕೂಟದ ವತಿಯಿಂದ ಪ್ರಕಾಶ್​ರಾಜ್​ಗೆ ಮಾನವ ರತ್ನ, ಹಿದಾಯತುಲ್ಲಾ ಅಬ್ಬಾಸ್​ಗೆ ಸೇವಾ ರತ್ನ, ಸುರೇಶ್​ ಭಟ್​ ಬಾಕ್ರಬೈಲ್​ ಅವರಿಗೆ ಸೌಹಾರ್ದ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ

ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್​ ಒಕ್ಕೂಟದ ವತಿಯಿಂದ ಪ್ರಕಾಶ್​ರಾಜ್​ಗೆ ಮಾನವ ರತ್ನ, ಹಿದಾಯತುಲ್ಲಾ ಅಬ್ಬಾಸ್​ಗೆ ಸೇವಾ ರತ್ನ, ಸುರೇಶ್​ ಭಟ್​ ಬಾಕ್ರಬೈಲ್​ ಅವರಿಗೆ ಸೌಹಾರ್ದ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿವಿಧ ಸಮುದಾಯಗಳ ಸ್ನೇಹ ಸಮಾವೇಶವನ್ನು ಅ.31ರಂದು ಸಂಜೆ 6.30ಕ್ಕೆ ಬಾಸೆಲ್​ ಮಿಷನ್​ ಮೆಮೋರಿಯಲ್​ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್​ ಮೌಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್​ ಅರ್ಷದ್​ ಗಣ್ಯರ ಸಮ್ಮುಖದಲ್ಲಿ ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳಾದ ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್​, ಚಂದ್ರಶೇಖರ ಶೆಟ್ಟಿ ಕುಂದಾಪುರ, ಬಿಪಿನ್​ ಚಂದ್ರಪಾಲ್​ ಕಾರ್ಕಳ, ಗೀತಾ ಸುರೇಶ್​ ಕುಮಾರ್​, ಜೆರಾಲ್ಡ್​ ಪಿಂಟೋ, ಫಾತಿಮಾ ರಲಿಯಾ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ಯಾಸೀನ್​ ಮಲ್ಪೆ ಮಾತನಾಡಿ, ಕಳೆದ 25 ವರ್ಷಗಳಿಂದ ಸಾಮಾಜಿಕ ಸೇವೆ, ಸಮುದಾಯದ ಏಕತೆ ಹಾಗೂ ವಿವಿಧ ಧರ್ಮಗಳ ನಡುವಿನ ಸೌಹಾರ್ದ ಮತ್ತು ಸಹಬಾಳ್ವೆಗಾಗಿ ಉಡುಪಿ ಜಿಲ್ಲಾ ಮುಸ್ಲಿಮ್​ ಒಕ್ಕೂಟ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ವಂತ ಹಾಗೂ ವಿಶಾಲವಾದ ಕಚೇರಿ ಮತ್ತು ಸಭಾಂಗಣ ಹೊಂದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾದ ಶಭೀ ಅಹ್ಮದ್​ ಖಾಝಿ, ನಸೀರ್​ ಅಹ್ಮದ್​ ಕಾರ್ಕಳ, ಸಯ್ಯದ್​ ಫರೀದ್​, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್​ ಹುಸೈನ್​ ಕಟಪಾಡಿ, ಕಾರ್ಯದರ್ಶಿ ಜಫ್ರುಲ್ಲಾ ತೋನ್ಸೆ, ಖಜಾಂಚಿ ಇಕ್ಬಾಲ್​ ಎಸ್​.ಕೆ., ಸಂಘಟನಾ ಕಾರ್ಯದರ್ಶಿ ಜಮೀರ್​ ಮೌಲಾನಾ, ಜಿಲ್ಲಾ ಸದಸ್ಯ ಪೀರು ಸಾಹೇಬ್​, ಮಾಜಿ ಅಧ್ಯಕ್ಷ ಅಶ್ಪಕ್​ ಅಹ್ಮದ್​ ಹಾಗೂ ಟಿ.ಎಸ್​.ಅನ್ಸಾರ್​ ಉಪಸ್ಥಿತರಿದ್ದರು.