ಬೆಂದೂರ್‌ವೆಲ್‌ನ ಗ್ಯಾಸ್ ಸ್ಟೇಷನ್ ಬಳಿಯ ರಸ್ತೆಯುದ್ದಕ್ಕೂ ಅಟೋರಿಕ್ಷಾಗಳು ಸಾಲುಗಟ್ಟಿ ನಿಂತಿದ್ದವು.
ಮಂಗಳೂರು: ಮುಂದಿನ ತಿಂಗಳು ಗ್ಯಾಸ್ ದರ ಏರಿಕೆಯಾಗಬಹುದು ಎನ್ನುವ ಸುದ್ದಿಯಿಂದಾಗಿ ನಗರ ಸುತ್ತಮುತ್ತಲಿನ ಆಟೋರಿಕ್ಷಾದವರು ಎಲ್‌ಪಿಜಿ ಗ್ಯಾಸ್ ತುಂಬಿಸಲು ಒಮ್ಮಿಂದೊಮ್ಮಲೇ ಬಂಕ್(ಫಿಲ್ಲಿಂಗ್ ಸ್ಟೇಷನ್)ನತ್ತ ಧಾವಿಸಿ ಬಂದ ಹಿನ್ನೆಲೆಯಲ್ಲಿ ಸರಿಸುಮಾರು ಅರ್ಧ ಕಿ.ಮೀ.ನಷ್ಟು ಉದ್ದಕ್ಕೆ ಆಟೋಗಳ ಸಾಲು ಬೆಂದೂರ್‌ವೆಲ್‌ನಲ್ಲಿ ಸೋಮವಾರ ಕಂಡುಬಂತು.
ಬೆಳಗ್ಗಿನಿಂದ ಎಲ್‌ಪಿಜಿ ಗ್ಯಾಸ್‌ನಿಂದ ಓಡುವ ರಿಕ್ಷಾಗಳು ಬೆಂದೂರ್‌ವೆಲ್‌ನ ಗ್ಯಾಸ್ ಸ್ಟೇಷನ್‌ನತ್ತ ಧಾವಿಸಿ ಬಂದರು. ರಸ್ತೆ ಬದಿಯುದ್ದಕ್ಕೂ ರಿಕ್ಷಾಗಳು ಸಾಲುಗಟ್ಟಿ ನಿಂತಿದ್ದವು. ಕೆಲವರು ರಿಕ್ಷಾದವರ ಪ್ರತಿಭಟನೆ ಇರಬಹುದು ಎಂದು ಹೇಳಿಕೊಳ್ಳುತ್ತಿದ್ದರು. ಒಂದೊದೇ ರಿಕ್ಷಾಕ್ಕೆ ಫಿಲ್ಲಿಂಗ್ ನಡೆಸುತ್ತಾ ಬರುತ್ತಿದ್ದಂತೆಯೇ ಇತ್ತ ನೂರಾರು ರಿಕ್ಷಾಗಳು ಧಾವಿಸಿ ಬಂದು ಸಾಲುಗಟ್ಟಿ ನಿಂತಿದ್ದವು. ಸ್ವಲ್ಪ ಟ್ರಾಫಿಕ್ ಸಮಸ್ಯೆಯೂ ಉಂಟಾಗಿತ್ತು.
ಗ್ಯಾಸ್ ಕೊರತೆ ಇಲ್ಲ. ಹೀಗೆ ಒಮ್ಮಲೆ ಎಲ್ಲ ರಿಕ್ಷಾದವರು ಧಾವಿಸಿ ಬಂದು ಫಿಲ್ಲಿಂಗ್ ನಡೆಸಿದಾಗ ಗ್ಯಾಸ್ ಖಾಲಿಯಾಗುವುದು ಸಹಜ. ಸಂಜೆ ಹೊತ್ತಿಗೆ ಮತ್ತೆ ಗ್ಯಾಸ್ ಬರುತ್ತದೆ. ಯಾರೂ ಆತಂಕಪಡಬೇಕಾಗಿಲ್ಲ ಎಂದಿದ್ದಾರೆ.
ಇತ್ತ ಕದ್ರಿಯ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ‘ಗ್ಯಾಸ್ ಇಲ್ಲ ಖಾಲಿ ಆಗಿದೆ’ ಎನ್ನುವ ಬೋರ್ಡ್ ಹಾಕಿದ್ದರು. ಅತ್ತ ಕೊಟ್ಟಾರಚೌಕಿಯ ಟೋಟಲ್ ಎನರ್ಜೀಸ್ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಗ್ಯಾಸ್ ಖಾಲಿಯಾದ ಕಾರಣ ಬ್ಯಾರಿಕೇಡ್‌ಗಳನ್ನು ಅಡ್ಡ ಇಟ್ಟು ಬಂಕ್ ಬಂದ್ ಮಾಡಿದ್ದಾರೆ. ಗ್ಯಾಸ್ ಕೊರತೆಯಲ್ಲ. ಬದಲಾಗಿ ಬೇಡಿಕೆ ಹೆಚ್ಚಾದ ಕಾರಣ ಬೇಗನೆ ಗ್ಯಾಸ್ ಖಾಲಿಯಾಯಿತು ಎಂದು ಬಂಕ್‌ನವರು ಹೇಳುತ್ತಾರೆ.