ಉಡುಪಿಯ ಉದ್ಯಾವರದಲ್ಲಿರುವ ಸಿಎನ್​ಜಿ ಪಂಪ್​ನಲ್ಲಿ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಚಾಲಕ-ಮಾಲೀಕರು ಆಟೋವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಪಂಪ್​ ಬಳಿ ಪ್ರತಿಭಟಿಸಿದರು. 
ಉಡುಪಿ

ಸಿಎನ್​ಜಿ ದರ ಏರಿಕೆ, ಆಟೋ ಚಾಲಕರ ಪ್ರತಿಭಟನೆ

* ಉದ್ಯಾವರ ಪಂಪ್​ ಎದುರು ವಾಹನ ಜಮಾ

* ಪೊಲೀಸರೊಂದಿಗೆ ಮಾತಿನ ಚಕಮಕಿ

ಉಡುಪಿ: ಸಿಎನ್​ಜಿ ಗ್ಯಾಸ್​ ಬಂಕ್​ಗಳಲ್ಲಿ ಏಕಾಏಕಿ ಗ್ಯಾಸ್​ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಆಟೋ ಚಾಲಕರು ಉದ್ಯಾವರದಲ್ಲಿ ಶನಿವಾರ (ಮಾ.14) ಪ್ರತಿಭಟಿಸಿದ್ದಾರೆ. ಉದ್ಯಾವರದಲ್ಲಿರುವ ಏಜೀಸ್​ ಅಟೋಗ್ಯಾಸ್​ ಪಂಪ್​ನಲ್ಲಿ ದಿಢೀರ್​ ರೇಟ್​ ಹೆಚ್ಚು ಮಾಡಿರುವುದನ್ನು ಖಂಡಿಸಿ ಪಂಪ್​ ಎದುರಿನಲ್ಲಿ ಪ್ರತಿಭಟಿಸಿದರು.
ಕಟಪಾಡಿ ಅಟೋ ಚಾಲಕ ಮತ್ತು ಮಾಲಕರ ಸಂಘ, ಉಡುಪಿ ಆಶ್ರಯ ದಾತ ಅಟೋ ಯೂನಿಯನ್​ ಹಾಗೂ ಮಲ್ಪೆ ಅಟೋ ಚಾಲಕ ಮತ್ತು ಮಾಲಕರ ಸಂಘದ ನೇತೃತ್ವದಲ್ಲಿ ನೂರಾರು ಚಾಲಕರು ತಮ್ಮ ಆಟೋವನ್ನು ಪಂಪ್​ ಮುಂಭಾಗದ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಲೀಟರ್​ಗೆ 18 ರೂ. ಹೆಚ್ಚಳ

ಕಟಪಾಡಿ ಅಟೋ ಯೂನಿಯನ್​ ಅಧ್ಯಕ್ಷ ಪ್ರೇಮಕುಮಾರ್​ ಮಾತನಾನಾಡಿ, ಉದ್ಯಾವರ ಖಾಸಗಿ ಗ್ಯಾಸ್​ ಬಂಕ್​ನಲ್ಲಿ ಕೆಲವು ದಿನಗಳ ಹಿಂದೆ ಲೀಟರ್​ಗೆ 60ರೂ. ಇತ್ತು. ಅದನ್ನು ಇತ್ತೀಚೆಗೆ 72.30ರೂ.ಗೆ ಏರಿಕೆ ಮಾಡಿದ್ದರು. ಇದೀಗ ಏಕಾಏಕಿ ಮತ್ತೆ 18 ರೂ. ಏರಿಸಿದ್ದು ಲೀಟರ್​ಗೆ 90ರೂ. ಮಾಡಿದ್ದಾರೆ. ಆಟೋದವರಿಂದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸರೊಂದಿಗೆ ಮಾತಿನ ಚಕಮಕಿ

ಆಟೋ ಚಾಲಕರು ಪ್ರತಿಭಟನೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪೊಲೀಸರು ಪಂಪ್​ ಎದುರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಚಾಲಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಚಾಲಕರು ಮತ್ತು ಮಾಲೀಕರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠರಿಗೆ ಮನವಿ ಸಲ್ಲಿಸಿದರು.
ಕಟಪಾಡಿ ಅಟೋ ಯೂನಿಯನ್​ನ ಪ್ರಧಾನ ಕಾರ್ಯದರ್ಶಿ ಹನೀಫ್​ ಮಣಿಪುರ, ಮಲ್ಪೆ ಅಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಶಂಭು ಕರ್ಕೇರ, ಆಶ್ರಯದಾತ ಆಟೋ ಯೂನಿಯನ್​ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
"

ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಯುದ್ಧ ಆಗುತ್ತಿದೆ ಎಂಬ ನೆಪವೊಡ್ಡಿ ಅನಗತ್ಯವಾಗಿ ಉದ್ಯಾವರದ ಪಂಪ್​ನಲ್ಲಿ ಸಿಎನ್​ಜಿ ಗ್ಯಾಸ್​ ದರ ಏರಿಕೆ ಮಾಡಿದ್ದಾರೆ. ಓಲ್ಡ್​ ಸ್ಟಾಕ್​ ಖಾಲಿಯಾಗಿದೆ. ಇದು ಹೊಸ ಸ್ಟಾಕ್​. ಈಗ ದರ ಏರಿಕೆ ಆಗಿದೆ ಎಂದು ಪಂಪ್​ನ ಮಾಲೀಕರು ತಿಳಿಸುತ್ತಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಆಟೋ ಚಾಲಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಹೆಚ್ಚಿನ ಹಣ ಪಡೆಯುತ್ತಿರುವ ಪಂಪ್​ನವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.