ಆಟೋ ಚಾಲಕ ನಿಟ್ಟೆ ಗ್ರಾಮದ ಅತ್ತೂರು ನಿವಾಸಿ ಪ್ರಶಾಂತ್ ಪೂಜಾರಿ
ಕಾರ್ಕಳ: ಆಟೋ ಚಾಲಕ ನಿಟ್ಟೆ ಗ್ರಾಮದ ಅತ್ತೂರು ನಿವಾಸಿ ಪ್ರಶಾಂತ್ ಪೂಜಾರಿ ತಮ್ಮ 43ನೇ ವಯಸ್ಸಿನಲ್ಲಿ ಪಿಯುಸಿ ಪರೀಕ್ಷೆ ತೇರ್ಗಡೆಯಾಗಿ ಗಮನ ಸೆಳೆದಿದ್ದಾರೆ.
ಬಾಲ್ಯದಲ್ಲಿ ಬಡತನದಿಂದ ಓದಲು ಅವಕಾಶ ಸಿಕ್ಕಿರಲಿಲ್ಲ. ಅತ್ತೂರು ಸೇಂಟ್ ಲಾರೆನ್ಸ್ ಹೈಸ್ಕೂಲ್‌ನಲ್ಲಿ 1996-97ನೇ ಸಾಲಿನಲ್ಲಿ 9ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ಬಳಿಕ ಶಾಲೆಯತ್ತ ಮುಖ ಮಾಡಿಲ್ಲ. ಮುಂದೆ ಓದುವ ವಾತಾವರಣವೂ ಮನೆಯಲ್ಲಿ ಇರಲಿಲ್ಲ ಎಂದು ಪ್ರಶಾಂತ್ ತಿಳಿಸಿದ್ದಾರೆ.
ತಾನು ಪಿಯುಸಿ ಮಾಡಬೇಕೆಂದು ಛಲ ಬಿಡದೆ ಪ್ರಯತ್ನ ಮುಂದುವರಿಸಿದ್ದಾರೆ. ಅತ್ತೂರು ಹೈಸ್ಕೂಲ್‌ನ ಶಿಕ್ಷಕರ ನೆರವಿನಿಂದ 2024-25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದರು. ಮುಂದೆ ಕಲಿಯಬೇಕೆಂಬ ಹಂಬಲವಿದ್ದ ಕಾರಣ, ಕಾರ್ಕಳದ ಟ್ಯುಟೋರಿಯಲ್ ಒಂದರಲ್ಲಿ ಮೂರು ತಿಂಗಳ ಕಾಲ ಪಿಯುಸಿ ಕೋಚಿಂಗ್ ಪಡೆದು ಪರೀಕ್ಷೆ ಬರೆದು, ಕಲಾ ವಿಭಾಗದಲ್ಲಿ 334 ಅಂಕ ಪಡೆದಿದ್ದಾರೆ. ಪತ್ನಿ ದೀಪಾ ಸುರತ್ಕಲ್‌ನಲ್ಲಿ ಉದ್ಯೋಗಿ. ಇಬ್ಬರು ಪುತ್ರರು. ಪ್ರಸ್ತುತ ಪ್ರಶಾಂತ್ ಅವರು ಅತ್ತೂರಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದಾರೆ.
ಕಲಿತ ವಿದ್ಯೆ ಮುಂದಿನ ಬದುಕಿಗೆ ದಾರಿದೀಪವಾಗುತ್ತದೆ ಎನ್ನುವ ನಂಬಿಕೆ ನನ್ನಲ್ಲಿದೆ. ಮುಂಜಾನೆ 3 ಗಂಟೆಗೆ ಎದ್ದು ಓದುವ ಹವ್ಯಾಸ ರೂಡಿಸಿಕೊಂಡಿದ್ದೆ. ಮುಂದೆ ಪದವಿ ಶಿಕ್ಷಣ ಪಡೆಯುವ ಹಂಬಲವಿದೆ.