ಮಹಿಳೆಯ ಕೊಲೆಗೆ ಯತ್ನಿಸಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಾದ ನಾಗೇಶ್ ಹಾಗೂ ಮಿಥುನ್.
* ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
* ಆಸ್ತಿ ವಿವಾದ, ಮಹಿಳೆಯ ಹತ್ಯೆಗೆ ಯತ್ನ
ಉಡುಪಿ: ಆಸ್ತಿ ವಿವಾದಕ್ಕೆ ಸಂಬಂಧಿಸಿ ತನ್ನ ಚಿಕ್ಕಮ್ಮಳನ್ನೇ ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರೋಪ ಸಾಬೀತಾಗಿದ್ದರಿಂದ ಉಡುಪಿ ಜಿಲ್ಲಾ ನ್ಯಾಯಾಲಯವು ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಬೆಳ್ತಂಗಡಿಯ ನಿವಾಸಿಯಾದ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಶಿಕ್ಷೆಗೆ ಗುರಿಯಾದವರು.
ಘಟನೆಯ ಹಿನ್ನೆಲೆ
ಉಡುಪಿಯ ಮಂಚಿ ಕುಮೇರಿ ನಿವಾಸ ರಮಾನಾಥ ರೈ ಎಂಬವರು ಮಣಿಪಾಲದ ಟೈಗರ್ ಸರ್ಕಲ್ ಬಳಿ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದು ಎಂದಿನಂತೆ (2022ರ ಫೆ.18 ರಂದು) ಅಂಗಡಿಗೆ ತೆರಳಿದ್ದರು. ಮನೆಯಲ್ಲಿ ಅವರ ಪತ್ನಿ ಸುಮತಿ ಒಬ್ಬರೇ ಇದ್ದರು. ಸಂಜೆ ಸುಮಾರು 7:15ರ ವೇಳೆಯಲ್ಲಿ ಅವರ ಅಕ್ಕನ ಮಗನಾದ ಬೆಳ್ತಂಗಡಿಯ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಮನೆಗೆ ಬಂದು ಬಾಗಿಲಿನ ಬೆಲ್ ಮಾಡಿದರು. ಸುಮತಿಯವರು ಕಿಟಿಕಿಯಲ್ಲಿ ನೋಡಿದ್ದು, ಮಿಥುನ್ ತನ್ನ ಸಂಬಂಧಿಯಾಗಿದ್ದರಿಂದ ಬಾಗಿಲು ತೆರೆದರು.
ಕುತ್ತಿಗೆ ಹಿಸುಕಿ ಚೀಲದಲ್ಲಿ ತುಂಬಿದರು!
ಮಿಥುನ್ ಮತ್ತು ನಾಗೇಶ್ ಇಬ್ಬರೂ ಮನೆಯೊಳಗೆ ಬಂದು ಸುಮತಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡು ಕುತ್ತಿಗೆ ಹಿಸುಕಿದರು. ಉಸಿರಾಟದ ತೊಂದರೆಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ಒಂದು ಚೀಲದಲ್ಲಿ ಹಾಕಿ ಬಳಿಕ ಸೂಟ್ಕೇಸ್ನ ಒಳಗೆ ತುಂಬಿ ಸ್ಥಳದಿಂದ ಸಾಗಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆಯಲ್ಲಿ ಪತಿ ರಮಾನಾಥ ರೈ ಹಾಗೂ ಅಕ್ಕಪಕ್ಕದ ಮನೆಯವರು ಸೇರಿ ಹೊರಗಿನಿಂದ ಬಾಗಿಲು ಬಡಿದಾಗ, ಆರೋಪಿಗಳಿಬ್ಬರೂ ಒಳಗಿನಿಂದ ಚಿಲಕ ತೆಗೆದು ಜನರನ್ನು ದೂಡಿ ಓಡಿ ಹೋಗುತ್ತಿದ್ದರು. ಅಲ್ಲಿ ಸೇರಿದ್ದ ಸಾರ್ವಜನಿಕರು ಸಹ ಓಡಿ ಅವರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು
ಈ ವೇಳೆ ಮನೆಯೊಳಗೆ ಬಂದ ರೈ ಅವರು ಪತ್ನಿಯನ್ನು ಹುಡಕತೊಡಗಿದರು. ಎಲ್ಲಿಯೂ ಕಾಣದಿದ್ದಾಗ ನೆಲದಲ್ಲಿ ಬಿದ್ದಿದ್ದ ಸೂಟ್ಕೇಸ್ ತೆರೆದು ನೋಡಿದಾಗ ಒಳಗಡೆ ಚೀಲದಲ್ಲಿ ಸುಮತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಿದರು. ವಾರಗಳ ಕಾಲ ಚಿಕಿತ್ಸೆಯ ಬಳಿಕ ಮಹಿಳೆ ಚೇತರಿಸಿಕೊಂಡಿದ್ದರು. ಘಟನೆಯ ಕುರಿತು ರಮಾನಾಥ ರೈ ಹಾಗೂ ಸ್ಥಳೀಯರಾದ ಸುದರ್ಶನ್ ಎಂಬದರು ಮಣಿಪಾಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಉಪನಿರೀಕ್ಷಕ ರಾಜಶೇಖರ್ ವಂದಲಿ ಅವರು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಐದು ವರ್ಷ ಕಠಿಣ ಸಜೆ
ಪ್ರಕರಣದ ವಿಚಾರಣೆ ನಡೆಸಿದ್ದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್, ಆರೋಪಿತರು ತಪ್ಪಿತಸ್ಥರು ಎಂದು ತೀಮಾರ್ನಿಸಿ ಮಿಥುನ್ ಹಾಗೂ ನಾಗೇಶ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಅಲ್ಲದೆ, ತಲಾ 20 ಸಾವಿರ ರೂ. ದಂಡ, ಅಪರಾಧಕ್ಕಾಗಿ 5 ವರ್ಷ ಕಠಿಣ ಸಜೆ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಪರಾಧಿಗಳಿಂದ ವಸೂಲಾದ ದಂಡದ ಹಣದ ಪೈಕಿ 45 ಸಾವಿರ ರೂ.ವನ್ನು ಗಾಯಾಳು ಸುಮತಿ ಅವರಿಗೆ ಪರಿಹಾರವಾಗಿ ನೀಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕ ಜಯರಾಂ ಶೆಟ್ಟಿ ತಿಳಿಸಿದ್ದಾರೆ.