ವೆನೆಜುವೆಲಾ ಮೇಲೆ ಅಮೆರಿಕಾ ದಾಳಿ ನಡೆಸಿರುವುದನ್ನು ಖಂಡಿಸಿ ಸಿಪಿಎಂ ನೇತೃತ್ವದಲ್ಲಿ ಕುಂದಾಪುರದಲ್ಲಿ ಪ್ರತಿಭಟನೆ ನಡೆಯಿತು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಶಿಧರ ಗೊಲ್ಲ, ಜಿಲ್ಲಾ ಸಮಿತಿ ಸದಸ್ಯೆ ಶೀಲಾವತಿ, ಬಲ್ಕೀಸ್ ಮೊದಲಾದವರಿದ್ದರು.
ಕುಂದಾಪುರ: ಸಾಮ್ರಾಜ್ಯಶಾಹಿ ಅಮೆರಿಕಾ ಸಮಾಜವಾದಿ ವೆನೆಜುವೆಲಾ ದೇಶದ ಮೇಲೆ ಸುಳ್ಳು ಆರೋಪ ಹೊರೆಸಿ ಸಾರ್ವಭೌಮ ರಾಷ್ಟ್ರದ ಮೇಲೆ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ವೆನೆಜುವೆಲಾ ಮೇಲೆ ಅಮೆರಿಕಾ ದಾಳಿ ನಡೆಸಿರುವುದನ್ನು ಖಂಡಿಸಿ ಸಿಪಿಎಂ ನೇತೃತ್ವದಲ್ಲಿ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ವೆನೆಜುವೆಲಾ ದೇಶದಲ್ಲಿನ ತೈಲ ಸಂಪತ್ತನ್ನು ಲೂಟಿ ಹೊಡೆಯಲು ಅಮೆರಿಕಾದ ಸಂಚಿನ ಭಾಗವಾಗಿ ವೆನೆಜುವೆಲಾ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿರುವುದು ಶಾಂತಿ ಬಯಸುವ ಎಲ್ಲರೂ ವಿರೋಧಿಸಬೇಕು. ಭಾರತ ಸರ್ಕಾರ ಅಮೆರಿಕಾದ ಗೊಡ್ಡು ಬೆದರಿಕೆಗೆ ಮಣಿಯದೇ ವೆನೆಜುವೆಲಾ ಪರ ನಿಲ್ಲಬೇಕು ಎಂದು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್.ನರಸಿಂಹ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಶಿಧರ ಗೊಲ್ಲ, ಜಿಲ್ಲಾ ಸಮಿತಿ ಸದಸ್ಯೆ ಶೀಲಾವತಿ, ಬಲ್ಕೀಸ್, ಕುಂದಾಪುರ ತಾಲೂಕು ಸಮಿತಿ ಸದಸ್ಯ ಚಿಕ್ಕ ಮೊಗವೀರ, ಸಂತೋಷ್ ಹೆಮ್ಮಾಡಿ, ಅಣ್ಣಪ್ಪ ಅಬ್ಬಿಗುಡ್ಡಿ, ರಾಮಚಂದ್ರ ನಾವಡ ಮೊದಲಾದವರಿದ್ದರು.