ಉಡುಪಿ: ವಿಶ್ವದ ವಿಜ್ಞಾನಿಗಳು ಈಗ ತಿಳಿಸಿರುವುದನ್ನು ಭಾರತದ ಋಷಿಗಳು ಪ್ರಾಚೀನ ಕಾಲದಲ್ಲೇ ತಿಳಿಸಿದ್ದಾರೆ. ಜ್ಯೋತಿಷ ಶಾಸ್ತ್ರಕ್ಕೆ ಕೊನೆಯಿಲ್ಲ. ನಿರಂತರ ಅಧ್ಯಯನಕ್ಕೆ ಯೋಗ್ಯವಾದ ವಿಶಿಷ್ಟ ಶಾಸ್ತ್ರ. ಜ್ಯೋತಿ ಎಂದರೆ ಬೆಳಕು ಎಂದರ್ಥ. ಮನುಷ್ಯನ ಬದುಕಿನಲ್ಲಿ ದು;ಖ, ತೊಂದರೆ, ಕತ್ತಲು ಆವರಿಸಿದಾಗ ಬೆಳಕು ನೀಡುವ ಶಾಸ್ತ್ರವಿದು. ಗ್ರಹಗತಿಗಳ ದೋಷದಿಂದ ಉದ್ಭವಿಸುವ ಸಮಸ್ಯೆಗಳಿಗೂ ಇಲ್ಲಿ ಪರಿಹಾರವಿದೆ. ಮನುಷ್ಯನ ಭವಿಷ್ಯ ತಿಳಿಸುವುದೇ ಜೋತಿಷ ಶಾಸ್ತ್ರವಾಗಿದೆ ಎಂದು ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಕಾಲೇಜ್ನ ಭೀಮ ಸಭಾಂಗಣಂನಲ್ಲಿ ನಿಟ್ಟೆ ವಿಶ್ವವಿದ್ಯಾಲಯ ನುಕ್ಸರ್, ಸೆಂಟರ್ ಫಾರ್ ಇಂಡಿಯನ್ ನಾಲೇಜ್ ಸಿಸ್ಟಮ್ ವತಿಯಿಂದ, ಪರ್ಯಾಯ ಶೀರೂರು ಮಠ, ಶ್ರೀಕೃಷ್ಣ ಮಠ ಉಡುಪಿ ಸಹಭಾಗಿತ್ವದಲ್ಲಿ ಶನಿವಾರ (ಅ.31) ಆಯೋಜಿಸಿದ್ದ 'ಜ್ಯೋರ್ತಿವಿಜ್ಞಾನಮ್' ಜ್ಞಾನ-ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ವಿವಿಗಳಿಗಿದೆ ಜವಾಬ್ದಾರಿ
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಎಸ್. ಮೂಡಿತ್ತಾಯ ಮಾತನಾಡಿ, ಯಾರಿಗೆ ಭಾರತದ ಇತಿಹಾದ ಬಗ್ಗೆ ಗೌರವ, ಜ್ಞಾನ ಇಲ್ಲವೋ ಅವರಿಗೆ ಭವಿಷ್ಯವಿಲ್ಲ. ಶಿಕ್ಷಣವು ನಿನ್ನೆ ಮತ್ತು ನಾಳೆಗಳ ಮಧ್ಯೆ ಸೇತುವೆ ಆಗಬೇಕು. ಭಾರತದಲ್ಲೀಗ ನಿನ್ನೆಯ ಬಗ್ಗೆ ಹೆಮ್ಮೆ, ನಾಳೆಯ ಭವಿಷ್ಯದ ನಿರೀಕ್ಷೆ ಇದೆ. ಆದರೆ, ಇವೆರಡರ ಮಧ್ಯೆ ಏನು ಎಂಬ ಪ್ರಶ್ನೆಯಿದೆ. ದೇಶದ ಎಲ್ಲ ವಿವಿಗಳು ಭಾರತೀಯತೆ ಮಹತ್ವವನ್ನು ವಿಶ್ಕಕೆ ಪ್ರದರ್ಶಿಸುವ ಜವಾಬ್ದಾರಿ ನಿಭಾಯಿಸಬೇಕು. ಜ್ಯೋರ್ತಿವಿಜ್ಞಾನದ ಕುರಿತು ಇರುವ ಅಪಾರ್ಥ ಕಳೆದು ಅರ್ಥ ಲಭಿಸಲು ಈ ಸಮ್ಮೇಳನ ಪೂರಕವಾಗಲಿ ಎಂದರು.
ಕೆನರಾ ಬ್ಯಾಂಕ್ ಉಡುಪಿ ವಿಭಾಗೀಯ ಎಜಿಎಂ ಟಿಎಸ್ಎನ್ ಪೂರ್ಣಾನಂದ ಮಾತನಾಡಿದರು. ವಿದ್ವಾಂಸರಾದ ಡಾ. ಬಿ.ಗೋಪಾಲ ಆಚಾರ್ಯ, ಪ್ರೊ. ಸುಧೀರ ರಾಜ ಕೆ., ಕಾಲೇಜ್ನ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯಉಪಸ್ಥಿತರಿದ್ದರು.
ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ತಿರುಪತಿಯ ನಿವೃತ್ತ ಜ್ಯೋತಿಷ ಪ್ರಾಧ್ಯಾಪಕ ಪ್ರೊ. ಎ.ಶ್ರೀಪಾದ ಭಟ್ಟ ದಿಕ್ಸೂಚಿ ಭಾಷಣ ಮಾಡಿದರು. 'ಜ್ಯೋರ್ತಿವಿಜ್ಞಾನಮ್' ಪುಸ್ತಕ ಬಿಡುಗಡೆ ಮಾಡಲಾಯಿತು.
ಸಂಸ್ಕೃತ ವಿದ್ಯಾಲಯದ ವಿದ್ಯಾರ್ಥಿಗಳಾದ ಸಮರ್ಥ ಜೋಶಿ ಹಾಗೂ ಸುಮುಖ ಅಡಿಗ ವೇದಘೋಷ ಪಠಿಸಿದರು. ಕಾಲೇಜ್ನ ಜ್ಯೋತಿಷ ವಿಭಾಗದ ಮುಖ್ಯಸ್ಥ ಹಾಗೂ ಸಮ್ಮೇಳನದ ಸಂಚಾಲಕ ಪ್ರೊ. ಡಿ. ಶಿವಪ್ರಸಾದ ತಂತ್ರಿ ಸ್ವಾಗತಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯದ ನುಕ್ಸರ್ ನಿರ್ದೇಶಕ ಪ್ರೊ. ಅನಿರ್ಬಾನ್ ಚಕ್ರವರ್ತಿ ವಂದಿಸಿದರು. ಸಂಸತ ಕಾಲೇಜ್ನ ಅಲಂಕಾರ ಶಾಸ್ತ್ರ ವಿಭಾಗದ ಮುಖ್ಯಸ್ಥ ಮಹೇಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ನಿಟ್ಟೆ ನುಕ್ಸರ್ನ ಸಹಾಯಕ ಪ್ರಾಧ್ಯಾಪಕಿ ಡಾ. ಅಕ್ಷತಾ ಕೆ., ಸಂಶೋಧನಾ ವಿದ್ಯಾರ್ಥಿನಿ ವರ್ಷಾ ಶೆಟ್ಟಿ ಸಹಕರಿಸಿದರು.
ಜ್ಯೋತಿಷ ಶಾಸ್ತ್ರವು ಮೂಢನಂಬಿಕೆಯಲ್ಲ. ಅದು ಸ್ಪಷ್ಟವಾಗಿ ಲಾಭ-ನಷ್ಟದ ಫಲ ಹೇಳುವ ಜ್ಞಾನವಾಗಿದೆ. ಶಾಸ್ತ್ರ ಎಂದಿಗೂ ಸುಳ್ಳಲ್ಲ. ಆದರೆ, ಜ್ಯೋತಿಷ್ಯ ಹೇಳುವವರಿಗೆ ಸಮರ್ಪಕ ಜ್ಞಾನ ಅಗತ್ಯ. ಈ ಶಾಸ್ತ್ರದ ಕುರಿತು ಹೆಚ್ಚಿನ ಚಿಂತನೆ ಆಗಬೇಕಿದೆ. ಯುವಸಮುದಾಯ ಈ ಜ್ಞಾನದ ಲಾಭ ಪಡೆಯುವಂತಾಗಬೇಕು.ವಿದ್ಯಾವಲ್ಲಭ ಶ್ರೀ. ಕಾಣಿಯೂರು ಮಠ.
ವಿಚಾರ ಗೋಷ್ಠಿ
ಸಭಾ ಕಾರ್ಯಕ್ರಮದ ಬಳಿಕ ಕೇರಳ ಕ್ಯಾಲಿಕಟ್ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಸುಂದರೇಶ್ವರನ್, ಬೆಂಗಳೂರಿನ ಚಾಣಕ್ಯ ವಿದ್ಯಾಲಯದ ಡಾ. ವಾಣಿಶ್ರೀ ಭಟ್, ಮೈಸೂರಿನ ಜ್ಯೋತಿರ್ಧಾಮ ವೇದಶಾಲೆಯ ಅಮೋಘ ಶರ್ಮ, ಬೆಂಗಳೂರಿನ ಸಾರಸ್ವತ ಸಂಸ್ಥಾನದ ಹಿರಿಯ ಸಂಶೋಧಕ ರಜತವಾಸುದೇವ ಮೂರ್ತಿ ಅವರು ಜ್ಯೋತಿಷ ಶಾಸ್ತ್ರದ ವಿವಿಧ ಆಯಾಮಗಳ ಕುರಿತು ವಿಷಯ ಮಂಡಿಸಿದರು. ಸಮ್ಮೇಳನಕ್ಕೂ ಮೊದಲು ಸಂಸ್ಕೃತ ಕಾಲೇಜ್ನಲ್ಲಿ ತೆರೆದಿರುವ ಆಕಾಶ ಕಾಯಗಳ ಕೌತುಕ ಜ್ಞಾನ ಒಳಗೊಂಡ 'ಪ್ರದರ್ಶಿನಿ'ಯನ್ನು ಶ್ರೀಗಳು ಉದ್ಘಾಟಿಸಿದರು.
ಭಾರತೀಯ ಜ್ಞಾನ ಪರಂಪರೆಯಲ್ಲಿ ವಿಜ್ಞಾನ ಇಲ್ಲವೆಂಬ ಆರೋಪ ಮಾಡುತ್ತಾರೆ. ಇದಕ್ಕೆ ಅಪಪ್ರಚಾರ, ವಿದೇಶಿ ಶಿಕ್ಷಣ ನೀತಿ ಕಾರಣ. ಭಾರತದಲ್ಲಿ ಈ ಹಿಂದೆ ಇದ್ದ ಎಲ್ಲ ಋಷಿಗಳೂ ವಿಜ್ಞಾನಿಗಳೇ ಆಗಿದ್ದು ಅವರ ಸಂಶೋಧನೆ ಅಪಾರ. ಸೂರ್ಯನಿಗೆ ಆಕರ್ಷಣೆ ಶಕ್ತಿಯಿದ್ದು, ಆತನ ಸುತ್ತ ಆಕಾಶಕಾಯಗಳು ಅಂಡಾಕಾರವಾಗಿ ಸುತ್ತಿಬರುತ್ತವೆ ಎಂದು ವೇದಗಳಲ್ಲೇ ತಿಳಿಸಿದ್ದಾರೆ. ಇದನ್ನು ಇಂದಿನ ವಿಜ್ಞಾನ ಯಂತ್ರಗಳಿಂದ ನೋಡಿದ್ದರೆ ನಮ್ಮ ಋಷಿಗಳು ಕಣ್ಣಿನಿಂದಲೇ ಕಂಡಿದ್ದರು. ವಿಶ್ವದ ವಿಜ್ಞಾನದ ಮೂಲವೇ ಭಾರತದ ಜ್ಯೋರ್ತಿವಿಜ್ಞಾನ.ಪ್ರೊ. ಅಮೃತೇಶ ಆಚಾರ್ಯ ಡಿ.ಎಸ್. ಸಂಸ್ಕೃತ ಕಾಲೇಜ್ನ ಪ್ರಾಂಶುಪಾಲ.