ಸಾಂಸ್ಕೃತಿಕ ವೈಭವದ ಧಾರ್ಮಿಕ ಸಂವಾದದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಠದ ದಿವಾನ ಸುದರ್ಶನ ಜೋಯಿಸ್, ಕಲಾವಿದ ಯಜ್ಞೇಶ್ ಆಚಾರ್, ನಿವೃತ್ತ ಮುಖ್ಯಶಿಕ್ಷಕ ಶ್ರೀಕೃಷ್ಣ ಶರ್ಮ ಉಪಸ್ಥಿತರಿದ್ದರು. 
ಉಡುಪಿ

ಭೂತ-ಭವಿಷ್ಯತ್ ಅರಿಯುವ ಕಣ್ಣು ಜ್ಯೋತಿಷ

ಸುಬ್ರಹ್ಮಣ್ಯ: ಮನುಷ್ಯ ಸುಖವನ್ನು ಬಯಸುತ್ತಾನೆ. ಭೂತಕಾಲ ಮತ್ತು ಭವಿಷ್ಯತ್ ಕಾಲದ ಬಗ್ಗೆ ತಿಳಿಯಲು ನಮಗೆ ಪ್ರಾಚೀನರು ನೀಡಿದ ಕಣ್ಣು ಜ್ಯೋತಿಷ ಶಾಸ್ತ್ರ. ಪಾಪಕರ್ಮದಿಂದ ದುಃಖ ಬರುತ್ತದೆ. ಒಳ್ಳೆಯ ಕೆಲಸ ಮಾಡಿದಾಗ ಕೇಡಾಗುವುದಿಲ್ಲ. ಹಿಂದಿನ ಮತ್ತು ಈಗಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಕಡಿಮೆಯಾಗಲು ದೇವರ ಆರಾಧನೆ ಮತ್ತು ಪೂಜೆ ಪುನಸ್ಕಾರಗಳು ಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀಪಾದರ 30ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಭಾನುವಾರ ಜ್ಯೋತಿಷ ಶಾಸ್ತ್ರ ನಂಬಿಕೆ-ಅಪನಂಬಿಕೆ ವಿಷಯದ ಧಾರ್ಮಿಕ ಸಂವಾದದಲ್ಲಿ ಆಶೀರ್ವಚನ ನೀಡಿದರು.
ಧಾರ್ಮಿಕ ಸಂವಾದದಲ್ಲಿ ವಿದ್ವಾಂಸ ಗೋಪಾಲಕೃಷ್ಣ ಜೋಯಿಸ ಮಾತನಾಡಿ, ಜ್ಯೋತಿಷ ಶಾಸ್ತ್ರವು ವೇದಾಂಗವಾಗಿದೆ. ಜನೋಪಯೋಗಿ ಶಾಸ್ತ್ರವಾದ ಕಾರಣ ನಂಬಿಕೆ ಮತ್ತು ಅಪನಂಬಿಕೆಗಳು ಇದರಲ್ಲಿ ಬರುತ್ತವೆ. ಆಸ್ತಿಕರಿಗೆ ಇದು ನಂಬಿಕೆಯ ವಿಷಯವಾಗಿದೆ. ಮೂರು ಸ್ಕಂದಗಳು ಮತ್ತು ಆರು ಅಂಗಗಳು ಈ ಶಾಸ್ತ್ರದಲ್ಲಿವೆ. ಫಲವನ್ನು ನಿರ್ಣಯ ಮಾಡಲಿರುವ ಶಾಸ್ತ್ರ ಇದು ಎಂದು ತಿಳಿಸಿದರು.
ವಿದ್ವಾಂಸ ಸಗ್ರಿ ಆನಂದ ತೀರ್ಥ ಸಂವಾದಕರಾಗಿದ್ದರು. ಭಕ್ತರು ಹಾಗೂ ಜಿಜ್ಞಾಸುಗಳು ಜ್ಯೋತಿಷ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ಗ್ರಹಣದ ಬಗ್ಗೆ, ಶಾಂತಿ ಕಾರ್ಯಗಳು, ಪ್ರಾಯಶ್ಚಿತ್ತ ಕರ್ಮಗಳ ಬಗ್ಗೆ ಇರುವ ನಿಯಮಗಳು ಇತ್ಯಾದಿಗಳು ಪ್ರಶ್ನೆಗಳಿಗೆ ಗೋಪಾಲಕೃಷ್ಣ ಜೋಯಿಸರು ಸಮರ್ಪಕ ಉತ್ತರ ನೀಡಿದರು.
ಶ್ರೀ ಮಠದ ದಿವಾನ ಸುದರ್ಶನ ಜೋಯಿಸ್, ಕಾರ್ಯಕ್ರಮ ಸಂಯೋಜಕ ಕಲಾವಿದ ಕೆ.ಯಜ್ಞೇಶ್ ಆಚಾರ್, ಪ್ರಮುಖರಾದ ನಿವೃತ್ತ ಮುಖ್ಯಶಿಕ್ಷಕ ಶ್ರೀಕೃಷ್ಣ ಶರ್ಮ, ಶ್ರೀ ಮಠದ ರವೀಂದ್ರ ಭಟ್, ಗುರುಪ್ರಸಾದ್ ಮುಚ್ಚಿಂತ್ತಾಯ, ಮಹಾಬಲಕೃಷ್ಣ ಭಟ್ ಗೋಪಾಳಿ, ಸುಹಾಸ್ ಉಪಾಧ್ಯಾಯ ದೇವರಗದ್ದೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸತ್ಯಶಂಕರ ಭಟ್ ಎಂ. ಕಾರ್ಯಕ್ರಮ ನಿರೂಪಿಸಿದರು.