ಅಮೆರಿಕದ ಪ್ರತಿಷ್ಠಿತ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ (ಪಿಎಸ್ಎ) ಸಂಸ್ಥೆಯ ಎಕ್ಸಲೆನ್ಸ್-ಇಪಿಎಸ್ಎ ಗೌರವ ಪದವಿಗಳಿಸಿದ ಉಡುಪಿಯ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಛಾಯಾಪತ್ರಕರ್ತ ಆಸ್ಟ್ರೋ ಮೋಹನ್.
* ಅಮೆರಿಕದ ಪ್ರತಿಷ್ಠಿತ ಪದವಿಗೆ ಭಾಜನ
ಉಡುಪಿ: ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಛಾಯಾಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ (ಪಿಎಸ್ಎ) ಸಂಸ್ಥೆಯ ಎಕ್ಸಲೆನ್ಸ್-ಇಪಿಎಸ್ಎ ಗೌರವ ಪದವಿ ಲಭಿಸಿದೆ.
ಪಿಎಸ್ಎ ಸಂಸ್ಥೆಯು ಆಸ್ಟ್ರೋ ಮೋಹನ್ ಅವರ ಮೂರು ದಶಕಗಳಿಗೂ ಮೀರಿದ ಛಾಯಾಪತ್ರಿಕೋದ್ಯಮದ ಸಾಧನೆ ಗುರುತಿಸಿ ಇಪಿಎಸ್ಎ ಗೌರವದ ಅಧಿಕೃತ ಪ್ರಮಾಣಪತ್ರ ನೀಡಿ ಗೌರವಿಸಿದೆ. ಇದು ಮೋಹನ್ ಅವರ ಫೋಟೋಗ್ರಾಫಿ ಪಯಣದಲ್ಲಿ ಮತ್ತೊಂದು ಮಹತ್ವದ ಅಂತಾರಾಷ್ಟ್ರೀಯ ಮೈಲುಗಲ್ಲಾಗಿದೆ.
1934ರಲ್ಲಿ ಸ್ಥಾಪನೆಯಾದ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ, ಛಾಯಾಗ್ರಹಣದ ಶಿಕ್ಷಣ, ಬೆಳವಣಿಗೆ ಮತ್ತು ಕಲಾತ್ಮಕ ಮೌಲ್ಯಗಳ ಉತ್ತೇಜನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಪ್ರತಿಷ್ಠಿತ ಛಾಯಾಚಿತ್ರ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆ ನೀಡುವ ಗೌರವ ಪದವಿಗಳು ಅಂತಾರಾಷ್ಟ್ರೀಯು ಛಾಯಾಚಿತ್ರ ವಲಯದಲ್ಲಿ ವಿಶೇಷ ಮನ್ನಣೆ ಪಡೆದಿವೆ.
ಪ್ರಶಸ್ತಿ ಗೆಲ್ಲುವುದಷ್ಟೇ ಮುಖ್ಯವಲ್ಲ. ನಿರಂತರತೆ, ತಾಳ್ಮೆ ಮತ್ತು ಛಾಯಾಚಿತ್ರದ ವಸ್ತುವಿನ ಬಗೆಗಿನ ಪ್ರಾಮಾಣಿಕತೆಯೂ ಅಷ್ಟೇ ಮುಖ್ಯ ಎನ್ನುವುದನ್ನು ಈ ಗೌರವ ಮತ್ತೊಮ್ಮೆ ನೆನಪಿಸಿದೆ. ನನ್ನನ್ನು ಪ್ರೋತ್ಸಾಹಿಸಿದ ಪಿಎಸ್ಎ ಸಂಸ್ಥೆ, ಛಾಯಾಚಿತ್ರ ಪ್ರದರ್ಶನಗಳ ಆಯೋಜಕರು, ತೀರ್ಪುಗಾರರು, ಮಾರ್ಗದರ್ಶಕರು, ಸಂಪಾದಕರು, ಸಹೋದ್ಯೋಗಿಗಳು ಹಾಗೂ ಛಾಯಾಗ್ರಾಹಕ ಮಿತ್ರರಿಗೆ ಕೃತಜ್ಞತೆಗಳು. ನನ್ನ ಪಯಣದ ಪ್ರತಿ ಹೆಜ್ಜೆಯಲ್ಲೂ ಸಹಕರಿಸಿ ಬೆಂಬಲಿಸಿದ ಪತ್ನಿ ಪ್ರವೀಣಾಳಿಗೆ ಈ ಗೌರವ ಅರ್ಪಿಸುತ್ತೇನೆ.