ಶಾಲೆ ಮುಂದೆ ಜಮಾಯಿಸಿದ ಪಾಲಕರು.
ವಿಜಯವಾಣಿ ಸುದ್ದಿಜಾಲ ಹೆಬ್ರಿ
ತಾಲೂಕಿನ ಕುಚ್ಚೂರು ಗ್ರಾಮದ ಕುಚ್ಚೂರು-1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಶಿಕ್ಷಕರು ನಿವೃತ್ತಿಯಾಗಿದ್ದು, ಇದೀಗ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರು ಇಲ್ಲವಾಗಿದೆ. 4 ಮಂದಿ ಅತಿಥಿ ಶಿಕ್ಷಕರಿಂದಲೇ ಮಕ್ಕಳಿಗೆ ಪಾಠ ಮಾಡಬೇಕಾಗಿದ್ದು, ಶ್ರೀವಾಗಿ ಸರ್ಕಾರಿ ಶಿಕ್ಷಕರನ್ನು ನೇಮಿಸುವಂತೆ ಶಾಲೆ ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಮಹೇಶ ಶೆಟ್ಟಿ ಆಗ್ರಹಿಸಿದರು.
ತಿಂಗಳಿಗೊಮ್ಮೆ ಬಂದು ಲೆಕ್ಕಾಚಾರ ಮಾಡಲು ಶನಿವಾರ ಶಾಲೆಗೆ ಶಿಕ್ಷಕಿಯೊಬ್ಬರು ಆಗಮಿಸಿದ್ದ ಸಂದರ್ಭ ಮಾತನಾಡಿದರು.
ಶಾಲೆಗೆ ಆಗಮಿಸಿದ ಶಿಕ್ಷಕಿಯನ್ನು ಸಾರ್ವಜನಿಕರು ಸೇರಿ ತಡೆದು ಚಾರ್ಜ್ ತೆಗೆದುಕೊಳ್ಳಲು ಅವಕಾಶ ನೀಡಲಿಲ್ಲ. ಒಂದು ತಿಂಗಳಿಗೊಮ್ಮೆ ಬಂದು ಹೋಗುವರು ನಮಗೆ ಬೇಡ ಎಂದು ಹೆತ್ತವರು ಅಸಮಾಧಾನ ವ್ಯಕ್ತಪಡಿಸಿದರು.
ಕುಚ್ಚೂರು-1 ಶಾಲೆಯಲ್ಲಿ 23 ವಿದ್ಯಾರ್ಥಿಗಳಿದ್ದು, ಮಕ್ಕಳ ವಿದ್ಯಾರ್ಜನೆಗೆ ತೊಂದರೆಯಾಗುತ್ತದೆ. ಕೂಡಲೇ ಶಿಕ್ಷಕರನ್ನು ನೇಮಿಸಬೇಕಿದೆ. ತಪ್ಪಿದ್ದಲ್ಲಿ ಶಾಲೆಯು ಮುಚ್ಚುವ ಅಪಾಯವೂ ಇದೆ. ಕೇವಲ ಶಾಲೆಯ ಲೆಕ್ಕಾಚಾರ ನೋಡಲು ಮಾತ್ರ ಸರ್ಕಾರಿ ಶಿಕ್ಷಕರ ನಿಯೋಜನೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜ್ಯೋತಿ ಮಾತನಾಡಿದರು. ಶಾಲೆಯ ಹಳೇ ವಿದ್ಯಾರ್ಥಿಗಳು, ಪಾಲಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾಭಿಮಾನಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.
ಶಾಲೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಅತಿಥಿ ಶಿಕ್ಷಕರಿದ್ದು, ಒಬ್ಬರನ್ನು ಆಡಳಿತ ದೃಷ್ಟಿಯಲ್ಲಿ ನೇಮಕ ಮಾಡುತ್ತೇವೆ. ಕಾಯಂ ಶಿಕ್ಷಕರನ್ನು ನಿಯೋಜನೆ ಮಾಡುವ ಬಗ್ಗೆ ಅಧಿಕಾರ ನಮ್ಮ ಬಳಿ ಇಲ್ಲ. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು.
— ಗಿರಿಜಮ್ಮ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ