ಗೋಕರ್ಣದ ಅಶೋಕೆಯಲ್ಲಿ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತನಿರತ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಖ್ಯಾತ ದೈವಜ್ಞ ವಿಷ್ಣು ಪೂಚಕ್ಕಾಡು, ಯಲ್ಲಾಪುರ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮತ್ತು ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಬುಧವಾರ ಭೇಟಿಯಾಗಿ ಆಶೀರ್ವಾದ ಪಡೆದರು.
- ರಾಘವೇಶ್ವರ ಶ್ರೀಗಳಿಂದ ಬ್ರಹ್ಮಚರ್ಯ ವಿವರಣೆ
- ಅಶೋಕೆಯಲ್ಲಿ ಅನ್ನಂಬ್ರಹ್ಮ ಪ್ರವಚನ ಮಾಲಿಕೆ
ಭಾರತೀಯ ಪರಂಪರೆಯ ಪ್ರಧಾನ ಆಚರಣೆಗಳಾಗಿದ್ದ ಬ್ರಹ್ಮಚರ್ಯ, ಗೃಹಸ್ಥ, ಸಂನ್ಯಾಸ ಮತ್ತು ವಾನಪ್ರಸ್ಥ ಎಂಬ ಆಶ್ರಮ ಪದ್ಧತಿಗಳು ಇಂದಿನ ಆಧುನಿಕ ಕಾಲದಲ್ಲಿ ಮಿತಿಗೊಳಪಟ್ಟಿವೆ. ಎರಡು ಆಶ್ರಮಗಳು ಆಚರಣೆಯಿಂದಲೇ ತಪ್ಪಿ ಹೋಗಿ ಸಂಪೂರ್ಣ ಮರೆಯಾಗಿವೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಇಲ್ಲಿನ ಅಶೋಕೆಯಲ್ಲಿ 33ನೇ ಚಾತುರ್ಮಾಸ್ಯ ನಿಮಿತ್ತ ಬುಧವಾರ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಅನ್ನಂಬ್ರಹ್ಮ ಪ್ರವಚನ ಮಾಲಿಕೆಯಲ್ಲಿ ಬ್ರಹ್ಮಚರ್ಯ ಕುರಿತು ವಿವರಿಸಿದರು.
ಶರೀರವನ್ನು ಹೊತ್ತಿರುವ ಮೂರು ಉಪಸ್ತಂಭಗಳ ಪೈಕಿ ಕೊನೆಯದಾದ ಬ್ರಹ್ಮಚರ್ಯ ಇವತ್ತಿನ ಕಾಲದಲ್ಲಿ ತನ್ನ ಮೂಲ ಪರಂಪರೆಯಲ್ಲಿ ಪಡೆದಿದ್ದ ಅರ್ಥ ಮತ್ತು ಅಸ್ತಿತ್ವದಿಂದ ಭಿನ್ನವಾಗಿದೆ. ಋಷಿಕುಲ ಪರಂಪರೆಯಲ್ಲಿ ನಾಲ್ಕು ಆಶ್ರಮಗಳಲ್ಲಿ ಮೊದಲನೆಯದಾಗಿದ್ದ ಬ್ರಹ್ಮಚರ್ಯ ಅಂದು ವೇದಾಧ್ಯಯನ ಮತ್ತು ಆತ್ಮಜ್ಞಾನಕ್ಕಾಗಿಯೇ ರೂಪಿತವಾದುದು. ಉಪಕರ್ಮಣ ಮತ್ತು ನೈಷಿಕ ಎಂಬ ಎರಡು ವಿಧಾನಗಳಲ್ಲಿ ಅನಸರಣೆಯಲ್ಲಿದ್ದ ಈ ಆಶ್ರಮಕ್ಕೆ ಅದರದ್ದೇ ಆದ ಕಟ್ಟುನಿಟ್ಟುಗಳಿದ್ದವು. ಆದರೆ, ಇಂದಿನ ಕಲಿಯುಗದಲ್ಲಿ ಆಶ್ರಮ ಪದ್ಧತಿ ಗೃಹಸ್ಥ ಮತ್ತು ಸಂನ್ಯಾಸಕ್ಕೆ ಮಾತ್ರ ಸೀಮಿತವಾಗಿ ಉಳಿದುಕೊಂಡಿವೆ. ಅಂದಿನ ಬ್ರಹ್ಮಚರ್ಯದ ಆಚರಣೆಗಳಾದ ಗುರುಕುಲ ವಾಸ, ಭಿಕ್ಷಾಟನೆ, ಕಾಲು ನಡೆಯಲ್ಲಿ ಸಂಚಾರ ಇತ್ಯಾದಿ ನಿಯಮಗಳನ್ನು ಅನುಸರಿಸಲು ಇಂದು ಅಸಾಧ್ಯವಾದ ಕಾರಣ ಒಟ್ಟಾರೆ ಪ್ರಾಚೀನ ಬ್ರಹ್ಮಚರ್ಯ ಆಶ್ರಮ ನಿಲುಗಡೆಗೊಂಡಿದೆ. ಇದೇ ರೀತಿ ಕಾಡಿಗೆ ಹೋಗಿ ವಾಸಿಸಬೇಕಾದ ವಾನಪ್ರಸ್ಥ ಆಶ್ರಮವೂ ಇಂದು ನಾಮಮಾತ್ರದಲ್ಲಿ ಉಳಿದುಕೊಂಡಿದೆ ಎಂದು ರಾಘವೇಶ್ವರ ಶ್ರೀಗಳು ನುಡಿದರು.
ಇಂದಿನ ಬ್ರಹ್ಮಚರ್ಯವನ್ನು ವಿವಿಧ ಶಾಸ್ತ್ರಗಳು ತಮ್ಮದೇ ಆದ ನೆಲೆಯಲ್ಲಿ ಅರ್ಥೈಸಿವೆ. ಧರ್ಮಶಾಸ್ತ್ರ, ಆಯುರ್ವೇದ, ಯೋಗಶಾಸ್ತ್ರ, ಉಪನಿಷತ್ ಇವುಗಳು ಬೇರೆಬೇರೆ ರೂಪದಲ್ಲಿ ಬ್ರಹ್ಮಚರ್ಯವನ್ನು ಕಂಡುಕೊಂಡಿವೆ. ಬ್ರಹ್ಮ ಮತ್ತು ಚರ್ಯ ಎಂಬೆರಡು ಶಬ್ದಗಳಿಂದ ಬ್ರಹ್ಮಚರ್ಯ ರೂಪಿತವಾಗಿದೆ. ಚರತಿ ಎಂಬ ಧಾತುವಿಗೆ ಗತಿ ಮತ್ತು ಭಕ್ಷಣೆ ಎಂಬ ಅರ್ಥ ವಿವರವಿದೆ. ಉಪನಿಷತ್ ಪ್ರಕಾರ ಬ್ರಹ್ಮಚರ್ಯ ಎಂದರೆ ಬ್ರಹ್ಮವನ್ನು ಸವಿಯುವವನು ಅಥವಾ ಆಸ್ವಾದಿಸುವವನು ಎನ್ನುವುದು ಒಂದರ್ಥ. ಎರಡನೆಯದು ಬ್ರಹ್ಮವನ್ನು ಆಚರಿಸುವವನು ಎನ್ನುವುದಾಗಿದೆ. ಬ್ರಹ್ಮದಲ್ಲಿ ಸಂಚಾರ ಮಾಡುವ ಮತ್ತು ಅದನ್ನೇ ಆಸ್ವಾದಿಸುವುದು ಇಂದಿನ ಬ್ರಹ್ಮಚರ್ಯವಾಗಿದೆ.
ಅಂದಿನ ಆಶ್ರಮ ಪದ್ಧತಿಗಳನ್ನು ಯಥಾವತ್ ಇಂದು ಪಾಲಿಸಲು ಅಸಾಧ್ಯ ಮತ್ತು ಅಶಕ್ಯವಾದ ಹಿನ್ನೆಲೆಯಲ್ಲಿ ಇಂದಿನ ಬ್ರಹ್ಮಚರ್ಯವನ್ನು ಗೃಹಸ್ಥರಿಗೂ ಅನ್ವಯಿಸಬಹುದಾಗಿದೆ. ಗೃಹಸ್ಥ ಅನ್ಯಸ್ತ್ರೀ ಹಿಂದೆ ಹೋಗದಿದ್ದರೆ ಅದೇ ಇವತ್ತಿನ ಬ್ರಹ್ಮಚರ್ಯ! ಆಯುರ್ವೇದ ಶಾಸ್ತ್ರ ಶರೀರದ ಉಪಸ್ತಂಭಗಳಾದ ಆಹಾರ ಮತ್ತು ನಿದ್ರೆಯ ಜತೆಗೆ ಬ್ರಹ್ಮಚರ್ಯಕ್ಕೆ ಇಂದ್ರಿಯ ಸಂಯಮ ಮತ್ತು ಸೌಮನಸ್ಯ ಅಗತ್ಯ ಎಂದಿದೆ. ಭೋಗಕ್ಕೆ ಕಡಿವಾಣ ಹಾಕಿ ಇಂದ್ರಿಯ ನಿಗ್ರಹಿತವಾಗಬೇಕು ಮತ್ತು ಮನಸು ಒಳ್ಳೆಯದಾಗಿರಬೇಕು. ಇಂದ್ರಿಯ ಅನಿರ್ಬಂಧಿತಕ್ಕೆ ರಾವಣ ಉತ್ತಮ ಉದಾಹರಣೆ. ಆಹಾರ ಸರಿಯಾಗಿದ್ದ ರಾವಣ ಸರಿನಿದ್ರೆ ಪಡೆದು ಬ್ರಾಹ್ಮೀ ಮುಹೂರ್ತದಲ್ಲಿಯೇ ಏಳುತ್ತಿದ್ದ. ಆದರೆ, ಇಂದ್ರಿಯದ ಹಿಡಿತ ತಪ್ಪಿ ತಾನು ನಾಶವಾಗಿ ತನ್ನವರನ್ನೂ ಬಲಿಗೈದ. ಇನ್ನು ಮನಸು ನಶಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ರಾಮಯಣದಲ್ಲಿನ ದಶರಥನ ತಂದೆ ಅಜಮಹಾರಾಜ ಉದಾಹರಣೆ. ತನ್ನ ಪತ್ನಿ ಇಂದುಮತಿಯ ಅಗಲುವಿಕೆಯಿಂದ ಸೌಮನಸ್ಯ ಇಲ್ಲದಾಗಿ ಅದೇ ಕೊರಗಿನಲ್ಲಿ ಮರಣಿಸಿದ.
ಈ ಹಿನ್ನೆಲೆಯಲ್ಲಿ ಕಠೋಪನಿಷತ್ ಪ್ರಕಾರ ಬ್ರಹ್ಮವನ್ನು ಆಚರಿಸುವವ ಪರಮಾತ್ಮನ ಪ್ರಾಪ್ತಿಗೆ ಬೇಕಾದುದನ್ನು ಮಾತ್ರ ಇಟ್ಟುಕೊಂಡು ಉಳಿದುದನ್ನು ತ್ಯಜಿಸುವುದೆ ಬ್ರಹ್ಮಚರ್ಯ. ಪರಮಾತ್ಮ ಎಂಬ ಮಹಾಸುಖವನ್ನು ಪಡೆಯ ಬಯಸುವ ಬ್ರಹ್ಮಚಾರಿಗೆ ಪ್ರಾಪಂಚಿಕ ಸುಖಗಳು ಅಲ್ಪವಾಗಬೇಕು. ಪರಮಾತ್ಮ ಪ್ರಾಪ್ತಿಯ ಆತ್ಮಾನಂದ ಅನುಭವಿಸುವವನಿಗೆ ಉಳಿದವೆಲ್ಲ ಸಹಜವಾಗಿ ಬೇಡ ಅನ್ನಿಸುತ್ತವೆ ಎಂದು ಶರೀರದ ಮೂರನೆಯ ಮತ್ತು ಕೊನೆಯ ಉಪಸ್ತಂಭ ಬ್ರಹ್ಮಚರ್ಯ ವಿವರವನ್ನು ಅನುಗ್ರಹಿಸಿ ಶ್ರೀಗಳು ಆಶೀರ್ವಚನವಿತ್ತರು.
ಬುಧವಾರದ ಧರ್ಮಸಭೆಯಲ್ಲಿ ಖ್ಯಾತ ದೈವಜ್ಞ ವಿಷ್ಣು ಪೂಚಕ್ಕಾಡು, ಯಲ್ಲಾಪುರ ವಿಶ್ವದರ್ಶನ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮತ್ತು ಖ್ಯಾತ ಜೋತಿಷಿ ಗೋಪಾಲಕೃಷ್ಣ ಹಂಡ್ರಮನೆ ಶ್ರೀಗಳ ಆಶೀರ್ವಾದ ಪಡೆದರು.
ಸಾಗರ ಹವ್ಯಕ ಮಂಡಲದ ಗೋಳಗೋಡು, ಕೋಗೋಡು, ಮರಗುಡಿ, ಸಾಗರ ಪೂರ್ವ ಮತ್ತು ಪಶ್ಚಿಮ ವಲಯಗಳಿಂದ ನಡೆದ ಗುರುಭಿಕ್ಷಾ ಸೇವೆ ನಿಮಿತ್ತ ಸುಬ್ರಾಯ ಮಂಜಪ್ಪ ಹೆಗಡೆ ದಂಪತಿ ಶ್ರೀಗಳಿಗೆ ಪೂರ್ಣಫಲ ಸಮರ್ಪಿಸಿದರು. ಸಭೆಯಲ್ಲಿ ಜಿ.ಕೆ. ಹೆಗಡೆ ಗೋಳಗೋಡು ಲಕ್ಷ್ಮೀನಾರಾಯಣ ಸಂಪ, ವಿ.ಜಿ. ಹೆಗಡೆ ಸಾಗರ, ಅನುಪಮಾ ಸಾರಂಗ, ರುಕ್ಮಾವತಿ ಸಾಗರ ಮತ್ತು ದಿನಪ್ರಧಾನ ಮುಳ್ಳಂಜ ವೆಂಕಟೇಶ್ವರ ಭಟ್ಟ ಉಪಸ್ಥಿತರಿದ್ದರು.