ಕೊಣಾಜೆ ಗ್ರಾಪಂ ವ್ಯಾಪ್ತಿಯ ಪ್ರಮುಖ ತಾಣವಾಗಿರುವ ಅಸೈಗೋಳಿ ಜಂಕ್ಷನ್. 
ಉಡುಪಿ

ಅಸೈಗೋಳಿಗೆ ಬೇಕು ಶೌಚಗೃಹ

ಅನ್ಸಾರ್ ಇನೋಳಿ ಉಳ್ಳಾಲ
ನಾಲ್ಕೂರುಗಳನ್ನು ಸೇರಿಸುವ ಅಸೈಗೋಳಿ ಜಂಕ್ಷನ್ ಕೊಣಾಜೆ ಗ್ರಾಮ ಪಂಚಾಯಿತಿಯ ಹೃದಯಭಾಗ. ಪ್ರತಿದಿನ ಸಾವಿರಾರು ವಾಹನಗಳು, ಸಾರ್ವಜನಿಕರು ಓಡಾಟ ನಡೆಸುವ ಈ ಜಂಕ್ಷನ್‌ನಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯ ಎನಿಸಿರುವ ಶೌಚಗೃಹವೇ ಇಲ್ಲ.
ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್ ಮುಖ್ಯ ಕಚೇರಿ, ವಸತಿಗೃಹ, ಪೊಲೀಸ್ ಠಾಣೆ, ಪೊಲೀಸರ ವಸತಿಗೃಹ, ಒಂದಷ್ಟು ದೂರದಲ್ಲಿ ಮಂಗಳೂರು ವಿವಿ, ಖಾಸಗಿ ಇಂಜಿನಿಯರಿಂಗ್ ಕಾಲೇಜು, ಐಟಿ ಸಂಸ್ಥೆ, ಮುಡಿಪುವಿಗೂ ಅಸೈಗೋಳಿಯೇ ರಹದಾರಿ. ಇಲ್ಲಿನ ರಸ್ತೆಯೂ ಚತುಷ್ಪಥಗೊಂಡಿದೆ. ಇಷ್ಟು ಮಾತ್ರವಲ್ಲದೆ ಇನೋಳಿ, ಪಾವೂರು, ಹರೇಕಳ, ಕೊಣಾಜಿ ವಿವಿ, ಬಿ.ಸಿ.ರೋಡು, ಮುಡಿಪುವಿ ಭಾಗಕ್ಕೆ ಅಸೈಗೋಳಿ ಮಾರ್ಗವಾಗಿಯೇ ಸಾಗಬೇಕು.
ಪ್ರತಿದಿನ ಸಾವಿರಾರು ಕಾರ್ಮಿಕರು, ಐಟಿ ಕಂಪನಿ, ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಅಸೈಗೋಳಿಯನ್ನು ದಾಟಲೇಬೇಕು. ಇಲ್ಲಿ ಸಾಕಷ್ಟು ವ್ಯಾಪಾರಿ ಮಳಿಗೆಗಳೂ ಇದ್ದು, ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲೇ ವಿವಿಧ ಪ್ರದೇಶಗಳಿಗೆ ಸಂಚರಿಸುವ ಬಸ್ಸಿಗಾಗಿ ಕಾಯುತ್ತಾರೆ. ಆದರೆ ಇಲ್ಲಿ ಶೌಚಗೃಹ ಇಲ್ಲದಿರುವುದು ಸಾರ್ವಜನಿಕರನ್ನು ಕಂಗೆಡಿಸಿದೆ. ಶೌಚಗೃಹ ನಿರ್ಮಿಸುವ ಯೋಜನೆ ಹಲವು ವರ್ಷಗಳಿಂದ ಪಂಚಾಯಿತಿ ಮುಂದಿದ್ದರೂ ನಿರ್ವಹಣೆಗೆ ಜನರಿಲ್ಲ ಎನ್ನುವ ಕಾರಣದಿಂದ ಕಾರ್ಯಗತಗೊಂಡಿಲ್ಲ.

ಮುಂದಿದೆ ಹಲವು ಯೋಜನೆಗಳು

ಅಸೈಗೋಳಿ ಜಂಕ್ಷನ್‌ನಲ್ಲಿರುವ ಮೈದಾನದಲ್ಲಿ ಪ್ರತಿದಿನ ಯುವಕರು, ಮಕ್ಕಳು ಆಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಮಾತ್ರವಲ್ಲದೆ ಮೊಸರುಕುಡಿಕೆ ಉತ್ಸವ ಅದ್ದೂರಿಯಾಗಿ ನಡೆಯುತ್ತದೆ. ಪಕ್ಕದಲ್ಲೇ ಅಯ್ಯಪ್ಪ ಸ್ವಾಮಿ ಮಂದಿರ, ಗುಳಿಗ ಕೊರಗಜ್ಜ ಕ್ಷೇತ್ರವೂ ಇದೆ. ಇಲ್ಲೂ ನಿರಂತರ ಕಾರ್ಯಕ್ರಮಗಳು ನಡೆಯುವುದರಿಂದ ಈ ಪ್ರದೇಶ ಜನನಿಬಿಡವಾಗಿರುತ್ತದೆ. ಈ ಮೈದಾನವನ್ನು ಮಿನಿ ಸ್ಟೇಡಿಯಂ ಆಗಿ ಮಾಡುವುದು, ವಾಕಿಂಗ್ ಟ್ರ್ಯಾಕ್ ನಿರ್ಮಾಣದಂಥ ಯೋಜನೆಗಳನ್ನು ಸಚಿವ ಖಾದರ್ ಹಮ್ಮಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿ ಎಲ್ಲ ಇದೆ ಎನ್ನುವ ವಾತಾವರಣ ನಿರ್ಮಾಣಗೊಂಡರೂ ಶೌಚಗೃಹ ಇಲ್ಲ ಎನ್ನುವ ಕೊರಗು ಸಾರ್ವಜನಿಕರನ್ನು ಕಾಡದಂತೆ ಮಾಡುವ ಅನಿವಾರ್ಯತೆ ಇದೆ.

ಅಸೈಗೋಳಿಯಲ್ಲಿ ಶೌಚಗೃಹ ನಿರ್ಮಿಸುವ ಯೋಜನೆ ಸದ್ಯಕ್ಕೆ ಗ್ರಾಮ ಪಂಚಾಯಿತಿ ಮುಂದಿಲ್ಲ. ಹಿಂದೆ ಯೋಜನೆ ರೂಪಿಸಲಾಗಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.

ಅಸೈಗೋಳಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟಗಳು ಇಲ್ಲಿನ ಮೈದಾನದಲ್ಲಿ ನಡೆಯುವ ಸಂದರ್ಭ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಅದರಲ್ಲೂ ಹೆಚ್ಚಾಗಿ ಮಹಿಳೆಯರು ಭಾಗವಹಿಸುವುದರಿಂದ ಸಾರ್ವಜನಿಕರ ಅನುಕೂಲ ಮತ್ತು ಪರಿಸರ ಸ್ವಚ್ಛತೆ ಕಾಪಾಡಲು ಶೌಚಗೃಹ ಅಗತ್ಯವಿದೆ.

ಅಸೈಗೋಳಿ ಯುವಕ ಮಂಡಲ ವತಿಯಿಂದ ಸಾರ್ವಜನಿಕ ಶೌಚಗೃಹ ನಿರ್ಮಿಸುವ ಯೋಜನೆ ಹಿಂದೊಮ್ಮೆ ರೂಪಿಸಲಾಗಿತ್ತು. ಆದರೆ ಸ್ವಚ್ಛತೆ ಕಾರಣದಿಂದ ಯೋಜನೆ ಕೈಬಿಡಲಾಗಿತ್ತು. ಪ್ರಸ್ತುತ ಪರಿಸರ ಅಭಿವೃದ್ಧಿ ಹೊಂದಿದ್ದು ಸುಸಜ್ಜಿತ ಶೌಚಗೃಹ ನಿರ್ಮಾಣ ನಿಟ್ಟಿನಲ್ಲಿ ಶಾಸಕರೊಂದಿಗೆ ಮಾತುಕತೆ ನಡೆಸಲಾಗುವುದು.