ಉಡುಪಿಯ ಗೀತಾ ಮಂದಿರದಲ್ಲಿ ನಡೆದ 'ಊರ್ಮಿಳಾ' ನಾಟಕದ ಸಭಾ ಕಾರ್ಯಕ್ರಮದಲ್ಲಿ ಪ್ರಮೋದ್ ಮಧ್ವರಾಜ್ ಮಾತನಾಡಿದರು. ನಾಗರಾಜ್ ಆಚಾರ್ಯ, ಪ್ರಭಾ ಶೆಣೈ, ವಿಶ್ವನಾಥ್ ಶೆಣೈ, ಡಾ. ಉಷಾ ಹೆಬ್ಬಾರ್, ಅಯನಾ, ಕೆ.ವಿ. ರಮಣ್ ಆಚಾರ್ಯ ಇದ್ದರು.
* ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅನಿಸಿಕೆ
* ಉಡುಪಿ ಗೀತಾ ಮಂದಿರದಲ್ಲಿ ಪ್ರದರ್ಶನ
ಉಡುಪಿ: ಸಾಹಿತ್ಯ, ನಿರ್ದೇಶನ, ಪ್ರಸ್ತುತಿ, ಧ್ವನಿ-ಬೆಳಕು, ಸಂಗೀತ-ರಂಗಸಜ್ಜಿಕೆ ಹೀಗೆ ಎಲ್ಲ ವಿಭಾಗದಲ್ಲೂ 'ಊರ್ಮಿಳಾ' ಏಕವ್ಯಕ್ತಿ ನಾಟಕವು ರಾಷ್ಟ್ರೀಯ ಮಟ್ಟದ ಛಾಪು, ಅಭಿವ್ಯಕ್ತಿ ಹೊಂದಿದೆ. ಅಯನಾ ವಿ. ರಮಣ್ ಅವರ ಅಭಿನಯವಂತೂ ಪರಾಕಾಷ್ಠೆಯಲ್ಲಿತ್ತು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಗೀತಾ ಮಂದಿರದಲ್ಲಿರುವ ಶ್ರೀ ಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ಭಾನುವಾರ (ಆ.30) ಸಂಜೆ ಆಯೋಜಿಸಿದ್ದ ಡಾ.ಎಚ್.ಎಸ್. ವೆಂಕಟೇಶಮೂರ್ತಿ ವಿರಚಿತ, ಡಾ.ಶ್ರೀಪಾದ ಭಟ್ ನಿರ್ದೇಶನದ 'ಊರ್ಮಿಳಾ' ಏಕವ್ಯಕ್ತಿ ನಾಟಕ ಪ್ರದರ್ಶನದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತಾರಾಷ್ಟ್ರೀಯ ಪ್ರತಿಭೆ
ಒಂದು ಗಂಟೆ ಅವಧಿಯ ಈ ನಾಟಕವು ಎಲ್ಲ ದೃಷ್ಟಿಯಿಂದಲೂ ಅತ್ಯುನ್ನತ ಮಟ್ಟದ್ದಾಗಿದೆ. ಎಲ್ಲ ಪಾತ್ರವನ್ನೂ ಒಬ್ಬರೇ ಅಭಿನಯಿಸುವುದು ಸುಲಭವಲ್ಲ. ದೂರದರ್ಶನ ಕಲಾವಿದೆ ಅಯನಾ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಎಲ್ಲ ಸಾಧ್ಯತೆ ಹಾಗೂ ಆ ನಿಟ್ಟಿನಲ್ಲಿ ಪೂರಕ ಪ್ರತಿಭೆಯೂ ಇದೆ ಎಂದರು.
ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. 'ಗೀತಾ ಮಾತೆ' ಖ್ಯಾತಿಯ ಪ್ರಭಾ ಶೆಣೈ, ವಿಶ್ವನಾಥ್ ಶೆಣೈ ದಂಪತಿ ಹಾಗೂ ಕಲಾವಿದೆ ಅಯನಾ ಅವರನ್ನು ಸನ್ಮಾನಿಸಲಾಯಿತು.
ಸಂಗೀತ ವಿದುಷಿ ಡಾ. ಉಷಾ ಹೆಬ್ಬಾರ್, ನಾಟಕದ ಸಂಗೀತ ನಿರ್ವಹಣೆ ಮಾಡಿದ ಡಾ. ಮೂಕಾಂಬಿಕಾ ಜಿ.ಎಸ್., ಬೆಳಕು ನಿರ್ವಹಿಸಿದ ಸುಜಿತ್ ಕಾರ್ಕಳ, ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಉಪಸ್ಥಿತರಿದ್ದರು. ಗೀತಾ ಮಂದಿರದ ಪ್ರಭಾರಿ ಕೆ.ವಿ. ರಮಣ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.