ಪಟ್ಟೂರು ಶ್ರೀರಾಮ ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನಾ ಸಮಾರಂಭದಲ್ಲಿ ಯಕ್ಷಗಾನ ಗುರು ಈಶ್ವರ ಪ್ರಸಾದ್ ಪಿ.ವಿ., ಭುಜಬಲಿ ಧರ್ಮಸ್ಥಳ, ಸುರೇಶ್ ಶೆಟ್ಟಿ, ಚಂದ್ರಶೇಖರ ಶೇಟ್ ಇತರರು ಇದ್ದರು. 
ಉಡುಪಿ

ಪಟ್ಲ ಫೌಂಡೇಶನ್‌ನಿಂದ ಜಗತ್ತಿನ ಮೂಲೆಗೂ ಹಬ್ಬಿದ ಕಲೆ

ಕೊಕ್ಕಡ: ಯಕ್ಷಗಾನದಿಂದ ಸಾವಿರಾರು ಜನರೊಂದಿಗೆ ಒಡನಾಟ, ಮಾತುಗಾರಿಕೆಯಲ್ಲಿ ಪ್ರಬುದ್ಧತೆ, ಸಾವಿರಾರು ಊರುಗಳ ಪರಿಚಯವಾಗುತ್ತದೆ. ಯಕ್ಷಧ್ರುವ ಪಟ್ಲ ಫೌಂಡೇಷನ್ ಯಕ್ಷಗಾನ ಉಳಿಸಲು ಮತ್ತು ಜಗತ್ತಿನಾದ್ಯಂತ ಪಸರಿಸಲು ಪೂರ್ಣ ಶ್ರಮ ವಹಿಸುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಕೇಂದ್ರೀಯ ಸಮಿತಿಯ ಟ್ರಸ್ಟಿ ಭುಜಬಲಿ ಧರ್ಮಸ್ಥಳ ಹೇಳಿದರು.
ಪಟ್ಟೂರಿನ ಶ್ರೀರಾಮ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯಲ್ಲಿ ನಡೆಯುವ ಯಕ್ಷಗಾನ ನಾಟ್ಯ ತರಗತಿ ಉದ್ಘಾಟಿಸಿ ಮಾತನಾಡಿದರು.
ಪಟ್ಲ ಫೌಂಡೇಷನ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ಎರಡು ದಶಕಗಳ ಹಿಂದೆ ಅನೇಕರು ಯಕ್ಷಗಾನದಿಂದ ವಿಮುಖರಾದಾಗ ಅನೇಕ ಕಲಾವಿದರು ಕುಗ್ಗಿ ಹೋಗುವ ಸಂದರ್ಭ ಎದುರಾಗಿತ್ತು. ಅಂತಹ ಸಂದರ್ಭ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಹುಟ್ಟಿಕೊಂಡಿತು. ಯಕ್ಷಗಾನವನ್ನೇ ಕಾಯಕ ಮಾಡಿಕೊಂಡಿದ್ದ ಅನೇಕ ಯಕ್ಷಗಾನ ಕಲಾವಿದರಿಗೆ ಈ ಫೌಂಡೇಷನ್ ಆಸರೆಯಾಗಿದೆ. ಫೌಂಡೇಷನ್ ಮೂಲಕ ತಾಲೂಕಿನ 12 ಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ನೀಡುತ್ತಾ ಬರುತ್ತಿದ್ದು ವಿದ್ಯಾರ್ಥಿ ದೆಸೆಯಿಂದಲೇ ಯಕ್ಷಗಾನದತ್ತ ಒಲವು ತೋರಲು ಸಹಕಾರಿಯಾಗಿದೆ ಎಂದರು.
ಶ್ರೀರಾಮ ವಿದ್ಯಾಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಫೌಂಡೇಷನ್ ಬೆಳ್ತಂಗಡಿ ಘಟಕದ ಸದಸ್ಯ ಮಂಜುನಾಥ ಶೆಟ್ಟಿ, ಯಕ್ಷ ಗುರು ಈಶ್ವರ ಪ್ರಸಾದ್ ಪಿ.ವಿ. ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ಸ್ವಾಗತಿಸಿದರು. ಶಾಲಾ ಯಕ್ಷಗಾನ ನಿಯೋಜಕಿ ಸ್ವಾತಿ ಕೆ.ವಿ. ವಂದಿಸಿದರು. ಸಹ ಶಿಕ್ಷಕಿ ಮೇಘಶ್ರೀ ನಿರೂಪಿಸಿದರು.