Arrest 
ಉಡುಪಿ

ವ್ಯಾಪಾರಿಗೆ ಬ್ಲ್ಯಾಕ್‌ಮೇಲ್ ಮಾಡಿದವರ ಬಂಧನ

ಕಾಸರಗೋಡು: ವಿದ್ಯುತ್ ಬಿಲ್ ಪಾವತಿಸಲು ಸಾಲ ಪಡೆದಿದ್ದ 5 ಸಾವಿರ ರೂ. ಹಿಂತಿರುಗಿಸುವುದಾಗಿ ಭರವಸೆ ನೀಡಿ ಉದ್ಯಮಿಯೊಬ್ಬರನ್ನು ಮನೆಗೆ ಕರೆಸಿ ಹಣ ಎಗರಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಬಣೂರು ನಿವಾಸಿ ರಿಜ್ವಾನಾ(28) ಸೇರಿದಂತೆ ಮೂವರನ್ನು ಕುಂಬಳೆ ಠಾಣೆ ಎಸ್‌ಐ ಅನೂಪ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ರಿಜ್ವಾನಾಳ ಪತಿ ಹಸನ್ ಆಸಿಫ್ (33), ಸಂಬಂಧಿಕ ಹಾಗೂ ಮೊಗ್ರಾಲ್ ನಿವಾಸಿ ಮೊಹಮ್ಮದ್ ಸಿರಾಜ್ (32) ಬಂಧಿತರು.

ಮುಟ್ಟಂ ಬಂಗರದ 64ರ ಹರೆಯದ ವ್ಯಾಪಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.ಸಾಲ ಪಡೆದಿದ್ದ ಹಣ ವಾಪಾಸು ನೀಡುವುದಾಗಿ ಮಹಿಳೆ ತನ್ನನ್ನು ಕರೆಸಿಕೊಂಡಿದ್ದು, ಮನೆಯಲ್ಲಿ ಉಳಿದವರು ಬಲವಂತವಾಗಿ ಮಹಿಳೆಯ ಮಲಗುವ ಕೊಠಡಿಗೆ ಕರೆದೊಯ್ದು ಪೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ, 2 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡದಿದ್ದಲ್ಲಿ ವಿಡಿಯೋ ಹಾಗೂ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ವ್ಯಾಪಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.