ಕಡಬ: ನಗರದ ಬ್ಯಾಂಕ್‌ಗಳಲ್ಲಿ ನಕಲಿ ಆಭರಣಗಳನ್ನು ಅಡವಿಟ್ಟು ಹಣ ಪಡೆಯಲು ಯತ್ನಿಸಿದ್ದ ಆರೋಪದಡಿ ಕಡಬ ಪೊಲೀಸರು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಬಂಧಿತರು. ಶುಕ್ರವಾರ ಇಬ್ಬರೂ ಕಡಬ ಪೇಟೆಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವ ಮಾಹಿತಿಯಂತೆ ಕಡಬ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ವಿಚಾರಿಸಿದರು.
ಈ ವೇಳೆ ತಾವು ಬ್ಯಾಂಕ್‌ನಲ್ಲಿ ಆಭರಣಗಳನ್ನು ಅಡವಿಡಲು ಬಂದಿರುವುದಾಗಿ ತಿಳಿಸಿದರು. ಬಳಿಕ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ತಮ್ಮ ಬಳಿಯಿದ್ದ ಆಭರಣಗಳ ದಾಖಲೆಗಳನ್ನು ಹೊಂದಿರಲಿಲ್ಲ. ಹೆಚ್ಚಿನ ತೂಕ ಹೊಂದುವಂತೆ ಕೃತಕ ಆಭರಣಗಳನ್ನು ಮಾರ್ಪಾಡುಗೊಳಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆಯುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.