ಶಾಸಕ ಯಶ್​ಪಾಲ್​ ಸುವರ್ಣ 
ಉಡುಪಿ

ಸಾಮಾಜಿಕ ಭದ್ರತಾ ಯೋಜನೆ ಆದಾಯ ಮಿತಿ ಹೆಚ್ಚಳಕ್ಕೆ ಮನವಿ

ಉಡುಪಿ: ರಾಜ್ಯದಲ್ಲಿ ಹಿರಿಯ ನಾಗರಿಕರು, ವಿಧವೆಯರು, ವಿಶೇಷಚೇತನರು ಹಾಗೂ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗೆ ನೆರವಾಗುತ್ತಿರುವ ಸಾಮಾಜಿಕ ಭದ್ರತಾ ಯೋಜನೆಗಳ ವಾರ್ಷಿಕ ಆದಾಯ ಮಿತಿಯನ್ನು ರೂ. 1.20 ಲಕ್ಷಕ್ಕೆ ಹೆಚ್ಚಿಸುವಂತೆ ಶಾಸಕ ಯಶ್​ಪಾಲ್​ ಸುವರ್ಣ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಮಾಸಾಶನ ಹಾಗೂ ವಿಧವಾ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ಬಡವರು ಮತ್ತು ದುರ್ಬಲ ವರ್ಗದವರ ಜೀವನಕ್ಕೆ ಪ್ರಮುಖ ಆಧಾರವಾಗಿವೆ. ಆದರೆ, ಪ್ರಸ್ತುತ ಆದಾಯ ಮಿತಿ ಕೇವಲ 32,000 ರೂ. ನಿಗದಿಯಾಗಿದ್ದು, ಇಂದಿನ ದುಬಾರಿ ಜೀವನದಲ್ಲಿ ಅನೇಕ ಅರ್ಹ ಫಲಾನುಭವಿಗಳು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆಹಾರ, ಔಷಧಿ ಹಾಗೂ ವೈದ್ಯಕಿಯ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆದಾಯ ಮಿತಿ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ನೀಡಲಾಗುತ್ತಿರುವ ಮಾಸಾಶನದ ಮೊತ್ತವೂ ಇಂದಿನ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ವೃದ್ಧಾಪ್ಯ ವೇತನ 600 ರೂ., ಸಂಧ್ಯಾ ಸುರಕ್ಷಾ ಯೋಜನೆಯ 1,200 ರೂ. ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಮಾಸಾಶನಗಳನ್ನು ದುಪ್ಪಟ್ಟುಗೊಳಿಸಿ, ಬೆಲೆ ಏರಿಕೆಗೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಶಾಸಕ ಯಶ್​ ಪಾಲ್​ ಸುವರ್ಣ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.