ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ಮಾಡಿ ಮನವಿ ಸಲ್ಲಿಸಿದರು.  
ಉಡುಪಿ

ಬೈಂದೂರು ಪಪಂ ವ್ಯಾಪ್ತಿ ಮರುವಿಂಗಡಣೆಗೆ ಮನವಿ!

 ಬೈಂದೂರು: ಗ್ರಾಮೀಣ ಭಾಗಗಲನ್ನು ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿ ಸೇರ್ಪಡೆಯಿಂದ ಗ್ರಾಮೀಣ ಪ್ರದೇಶಗಳ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆಯ ಕಾರ್ಯದರ್ಶಿಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ ಮನವರಿಕೆ ಮಾಡಿದರು.
 ಶಾಸಕ ಗುರುರಾಜ್ ಗಂಟಿಹೊಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಮುಖರೊಂದಿಗೆ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಮತ್ತು ಪೌರಾಡಳಿತ ಇಲಾಖೆ ಕಾರ್ಯದರ್ಶಿ ದೀಪಾ ಎಂ.ಚೋಳನ್ ಅವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ತಿಳಿಸಿದರು. 
 ಬೈಂದೂರು ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಗ್ರಾಮೀಣ ರೈತರಿಗೆ ಪಟ್ಟಣ ಪಂಚಾಯಿತಿಯ ನಿಯಮಗಳಿಂದ ತೊಂದರೆಯಾಗುತ್ತಿದೆ. ಬೈಂದೂರು ಪಪಂನಿಂದ ಗ್ರಾಮೀಣ ಭಾಗವನ್ನು ಕೈಬಿಟ್ಟು ಹೊಸದಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಮರುವಿಂಗಡಣೆ ಮಾಡಬೇಕು, ಬಫರ್ ಜೋನ್ ಮಿತಿಯನ್ನು ಕೈಬಿಟ್ಟು ಆ ಪ್ರದೇಶದಲ್ಲಿ ಗ್ರಾಪಂಗಳಿಗೆ ಅನ್ವಯಿಸುವ ನಿಯಮಗಳನ್ನು ಅಳವಡಿಸುವ ಮೂಲಕ ಅಕ್ರಮ ಸಕ್ರಮ, 94ಸಿ ಮತ್ತು ಕುಮ್ಕಿ ಹಾಗೂ ವಸತಿ ಯೋಜನೆ ಸೇರಿದಂತೆ ಇತರೆ ಎಲ್ಲ ಸರ್ಕಾರಿ ಯೋಜನೆಗಳ ಹಕ್ಕುಗಳು ರೈತರಿಗೆ ಸಿಗುವಂತೆ ಮಾಡಬೇಕೆಂದು ಮನವಿ ಮಾಡಿದರು. 
 ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಹಾಗೂ ಕಾರ್ಯದರ್ಶಿಗಳು ಅತಿ ಶೀಘ್ರದಲ್ಲಿ ಈ ಬಗ್ಗೆ ಆದ್ಯತೆ ಮೇರೆಗೆ ನಿಯಮಾನುಸಾರ ಕ್ರಮವಹಿಸಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿರುವುದಾಗಿ ಶಾಸಕರು ತಿಳಿಸಿದ್ದಾರೆ.