ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಶಿವರಾಮ ರೈ, ಡಾ.ರವಿ ಕಕ್ಕೆಪದವು, ದೀಪಕ್ ನಂಬಿಯಾರ್, ವಿಮಲಾ ರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ದಿನದ 24 ಗಂಟೆ ಸೇವೆ ನೀಡದೆ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಅನನುಕೂಲವಾಗುತ್ತಿದೆ. ಸಾವಿರಾರು ಭಕ್ತರು ಆಗಮಿಸುವ ಇಲ್ಲಿನ ಆಸ್ಪತ್ರೆಯಲ್ಲಿ 24 ಗಂಟೆಯೂ ವೈದ್ಯರು ಲಭ್ಯರಿರುವಂತೆ ಅಗತ್ಯ ಕ್ರಮಗೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಆಸ್ಪತ್ರೆ ಹೋರಾಟ ಸಮಿತಿ ನಿಯೋಗ ಬುಧವಾರ ಮನವಿ ಸಲ್ಲಿಸಿತು.
ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರವೇ ವ್ಯವಸ್ಥೆ ಸರಿಪಡಿಸಿ 24 ಗಂಟೆ ಆರೋಗ್ಯ ಸೇವೆ ಒದಗಿಸಲು ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಮುಖರಾದ ಶಿವರಾಮ ರೈ, ಡಾ.ರವಿ ಕಕ್ಕೆಪದವು, ದೀಪಕ್ ನಂಬಿಯಾರ್, ವಿಮಲಾ ರಂಗಯ್ಯ, ಗಿರಿಧರ್ ಸ್ಕಂಧ, ಗೋಪಾಲ್, ಡಾ.ಶಿವಕುಮಾರ್, ಸುಹಾಸ್ ಎಚ್.ಎಸ್., ದಿನೇಶ್, ಕಿರಣ್, ಚಿನ್ಮಯ್ ದಿನೇಶ್ ಉಪಸ್ಥಿತರಿದ್ದರು.
ನಿಯೋಗದ ಬೇಡಿಕೆ
ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ಸಾವಿರಾರು ಯಾತ್ರಾರ್ಥಿಗಳು ಆಗಮಿಸುತ್ತಾರೆ. ಈ ಪ್ರದೇಶದಲ್ಲಿ ಅಪಘಾತ, ಹೃದಯಾಘಾತ, ಹಾವು ಕಡಿತ ಸೇರಿದಂತೆ ಇತರ ತುರ್ತು ಸಂದರ್ಭದಲ್ಲಿ ಸಮರ್ಪಕ ಚಿಕಿತ್ಸೆ ಲಭ್ಯವಾಗದೆ ಅನೇಕರು ತೊಂದರೆ ಅನುಭವಿಸಿದ್ದಾರೆ. ವ್ಯವಸ್ಥಿತ ಸರ್ಕಾರಿ ಆಸ್ಪತ್ರೆ ಇದ್ದರೂ ತುರ್ತು ಸಂದರ್ಭದಲ್ಲಿ ವೈದ್ಯರು ಹಾಗೂ ಅಗತ್ಯ ಸೇವೆ ಲಭ್ಯವಿರುವುದಿಲ್ಲ. ಆದ್ದರಿಂದ ದಿನದ 24 ಗಂಟೆ ವೈದ್ಯಕೀಯ ಸೇವೆ, ಅಗತ್ಯ ಸಿಬ್ಬಂದಿ, ತುರ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.