ವಾಮಂಜೂರು ಜಂಕ್ಷನ್‌ಗೆ ಅನತಿ ದೂರದಲ್ಲಿ ಮಳೆ ನೀರು ಹರಿಯಲು ಬಿಡುವ ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯವಾಣಿ ಸುದ್ದಿಜಾಲ ಗುರುಪುರ
ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ರ ವಾಮಂಜೂರು ಜಂಕ್ಷನ್‌ಗೆ ಅನತಿ ದೂರದಲ್ಲಿ ಮಳೆ ನೀರು ಹರಿಯುವ ತೋಡಿಗೆ ಅಪಾರ್ಟ್‌ಮೆಂಟ್, ಅಂಗಡಿ-ಮುಂಗಟ್ಟು, ಮನೆಗಳ ಕೊಳಚೆ ನೀರು ಹರಿಯಲು ಬಿಡುತ್ತಿರುವವರ ವಿರುದ್ಧ ಮಂಗಳೂರು ಮನಪಾ ಮೂಲಕ ತಕ್ಷಣ ನೋಟಿಸ್ ಜಾರಿಗೊಳಿಸಿ ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದು ಸ್ಥಳ ಪರಿಶೀಲನೆ ನಡೆಸಿದ ಶಾಸಕ ಡಾ.ಭರತ್ ಶೆಟ್ಟಿ ಸ್ಥಳೀಯರಿಗೆ ಭರವಸೆ ನೀಡಿದರು.
ವಾಮಂಜೂರಿಗೆ ಹತ್ತಿರದ ಅಪಾರ್ಟ್‌ಮೆಂಟ್‌ವೊಂದರಿಂದ ಭಾರಿ ಪ್ರಮಾಣದ ಗಲೀಜು ನೀರು ತೆರೆದ ತೋಡಿನ ಮೂಲಕ ಸ್ಥಳೀಯ ವಸತಿ ಪ್ರದೇಶಗಳಲ್ಲಿ ಹರಿಯುತ್ತಿದೆ. ಈ ಪ್ರದೇಶದಲ್ಲಿ ದಿನವಿಡೀ ದುರ್ವಾಸನೆ ಬೀರುತ್ತಿದೆ. ಸೊಳ್ಳೆ ಕಾಟ ವಿಪರೀತವಾಗಿದೆ. ಎಸ್‌ಟಿಪಿ ಮೂಲಕ ಅಪಾರ್ಟ್‌ಮೆಂಟ್‌ನ ತ್ಯಾಜ್ಯ ನೀರು ವಿಲೇವಾರಿಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಸ್ಥಳೀಯರ ದೂರು ಆಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಮಳೆ ನೀರಿನ ಸಮಸ್ಯೆಗಾಗಿ ತೋಡು ನಿರ್ಮಾಣವಾಗುತ್ತಿದೆ. ಇದಕ್ಕೆ ಯಾವುದೇ ಮನೆ ಅಥವಾ ಅಂಗಡಿಮುಂಗಟ್ಟುಗಳ, ಅಪಾರ್ಟ್‌ಮೆಂಟ್‌ಗಳ ಕೊಳಚೆ(ಗಲೀಜು) ನೀರಿನ ಸಂಪರ್ಕ ಕೊಡುವಂತಿಲ್ಲ. ಈ ತೋಡಿನಲ್ಲಿ ಕುಡಿಯುವ ನೀರಿನ ಕೊಳವೆ ಹಾದು ಹೋಗಲಿದ್ದು, ಅದಕ್ಕೂ ಈ ಕೊಳಚೆ ನೀರಿನಿಂದ ಸಮಸ್ಯೆ ಉಂಟಾಗಲಿದೆ. ಮೊನ್ನೆ ಮನಪಾ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವರದಿಯಾಧರಿಸಿ ನೋಟಿಸು ಜಾರಿ ಮಾಡಲಾಗುತ್ತದೆ ಎಂದರು.
ಮಂಗಳೂರು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಪ್ರಮುಖರಾದ ಉಮೇಶ್, ರವಿರಾಜ್, ರಘು ಸಾಲ್ಯಾನ್, ಶೇಖರ ಪೂಜಾರಿ, ಕಿಶೋರ್, ಸ್ಥಳೀಯ ನಿವಾಸಿಗರು ಇದ್ದರು.
ಮಳೆ ನೀರು ಹರಿಯುವ ತೋಡಿಗೆ ಕೊಳಚೆ ನೀರು ಬಿಡಲಾಗುತ್ತಿದ್ದು, ಇದು ಹತ್ತಿರದ ರಾಜಕಾಲುವೆ ಮೂಲಕ ವಾಮಂಜೂರು ಕೆಳಭಾಗದ ಗ್ರಾಮಗಳ ಮೂಲಕ ಲ್ಗುಣಿ ನದಿ ಸೇರುತ್ತದೆ. ತೋಡು ನಿರ್ಮಾಣಕ್ಕಿಂತ ಮುಂಚೆ ಈ ಕೊಳಚೆ ನೀರು ಎಲ್ಲಿಗೆ ಹೋಗುತ್ತಿತ್ತು? ಇದರಿಂದ ಸುತ್ತಲ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ನದಿ ನೀರು ಕಲುಷಿತಗೊಳ್ಳುತ್ತಿದೆ. ಈ ನೀರು ಸರ್ಕಾರದ ಕುಡಿಯುವ ನೀರಿನ ಯೋಜನೆ ಮೂಲಕ ಗ್ರಾಮವಾಸಿಗಳಿಗೆ ತಲುಪುತ್ತದೆ. ಅಂಗಡಿಮುಂಗಟ್ಟು, ಅಪಾರ್ಟ್‌ಮೆಂಟ್, ಮನೆಯವರು ತ್ಯಾಜ್ಯ ನೀರು ವಿಲೇವಾರಿಗೆ ಸರ್ಕಾರದ ನಿಯಮದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
— ಜಯಂತಿ ಡಿ.ಸುವರ್ಣ ತಿರುವೈಲು ನಿವಾಸಿ
ಅಪಾರ್ಟ್‌ಮೆಂಟ್‌ನ ತ್ಯಾಜ್ಯ ನೀರನ್ನು ಟ್ಯಾಂಕರ್ ಮೂಲಕ ಹೊರಗೆ ಸಾಗಿಸಲಾಗುತ್ತಿದೆ. ಆದರೆ ಇಲ್ಲಿ ದುರ್ವಾಸನೆಯುಕ್ತ ಗಲೀಜು ನೀರು ಹರಿಯುತ್ತಿದ್ದು, ಸುತ್ತಲ ನಿವಾಸಿಗರಿಗೆ ತೊಂದರೆಯಾಗುತ್ತಿದೆ ಎಂಬುದು ಸತ್ಯ. ಎಲ್ಲಿಯೂ ಗಲೀಜು ನೀರು ತೆರೆದ ಪ್ರದೇಶಗಳಿಗೆ ಬಿಡುವಂತಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯವಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನ ಸೆಳೆದು ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು.
— ಡಾ.ಭರತ್ ಶೆಟ್ಟಿ ಶಾಸಕ