ಉಡುಪಿಯಲ್ಲಿ ಸಂಭವಿಸಿದ್ದ ದೋಣಿ ದುರಂತದಲ್ಲಿ ಮೃತಪಟ್ಟ ಮೈಸೂರಿನ ಯುವತಿ ದಿಶಾ ಎಸ್.
* ಉಡುಪಿಯಲ್ಲಿ ಸಂಭವಿಸಿದ್ದ ದೋಣಿ ದುರಂತ
* ಮೃತರ ಸಂಖ್ಯೆ 3ಕ್ಕೆ ಏರಿಕೆ
ಉಡುಪಿ: ಪ್ರವಾಸಿಗರನ್ನು ವಿಹಾರಕ್ಕೆ ಕರೆದೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಪಲ್ಟಿಯಾದ ದುರಂತದಲ್ಲಿ ನೀರಿನಲ್ಲಿ ಮುಳುಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಇನ್ನೋರ್ವ ಪ್ರವಾಸಿ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ (ಜ.27) ಮೃತಪಟ್ಟಿದ್ದಾಳೆ. ಮೈಸೂರಿನ ಉದಯಗಿರಿ ಗ್ರಾಮದ ಜಲಪುರಿ ನಿವಾಸಿ ಎಂ.ಶಿವಣ್ಣ ಅವರ ಪುತ್ರಿ ದಿಶಾ (23) ಮೃತ ದುರ್ದೈವಿ.
ಮೈಸೂರಿನ ಸರಸ್ವತಿಪುರಂನ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ 14 ಪ್ರವಾಸಿಗರು ಉಡುಪಿಗೆ ಬಂದಿದ್ದು, ವಿಹಾರಕ್ಕೆಂದು ಸಮುದ್ರದಲ್ಲಿ ಬೋಟ್ನಲ್ಲಿ ತೆರಳುತ್ತಿದ್ದಾಗ ಸೋಮವಾರ (ಜ.26) ಮಧ್ಯಾಹ್ನ 12 ಗಂಟೆಗೆ ಆಕಸ್ಮಿಕವಾಗಿ ಬೋಟ್ ಪಲ್ಟಿಯಾಗಿತ್ತು. ಹಂಗಾರಕಟ್ಟೆ ಬೀಚ್ ಸಮೀಪದ ಕೋಡಿಬೆಂಗ್ರೆ ಎಂಬಲ್ಲಿ ಈ ದುರಂತ ಸಂಭವಿಸಿತ್ತು.
ಚಾಮರಾಜನಗರ ಜಿಲ್ಲೆಯ ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಸಿಂಧು (25) ಹಾಗೂ ಹರವೆ ಗ್ರಾಮದ ಶಂಕರಪ್ಪ (27) ದೋಣಿ ದುರಂತದ ವೇಳೆ ಮೃತಪಟ್ಟಿದ್ದರು. ಉಳಿದವರನ್ನು ರಕ್ಷಣೆ ಮಾಡಲಾಗಿತ್ತು. ಘಟನೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಇಬ್ಬರು ಚೇತರಿಸಿಕೊಂಡಿದ್ದಾರೆ.