ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆಯ ಸಂದೇಶ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್​, ಶ್ವಾನದಳ ಹಾಗೂ ಬಾಂಬ್​ ನಿಷ್ಕ್ರಿಯ ದಳ ತಪಾಸಣೆ ನಡೆಸಿತು. 
ಉಡುಪಿ

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್​ ಬೆದರಿಕೆ!

* ಕೋರ್ಟ್​ ಸ್ಫೋಟಿಸುವುದಾಗಿ ಇ-ಮೇಲ್​ ಸಂದೇಶ 

*  ಪೊಲೀಸ್​, ಶ್ವಾನದಳದಿಂದ ತೀವ್ರ ತಪಾಸಣೆ 

ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯವನ್ನು ಸ್ಪೋಟಿಸುವುದಾಗಿ ಮತ್ತೆ ಇ-ಮೇಲ್​ ಮೂಲಕ ಬಾಂಬ್​ ಬೆದರಿಕೆ ಕರೆ ಬಂದಿದ್ದು, ಜಿಲ್ಲಾ ಪೊಲೀಸ್, ಶ್ವಾನದಳ ಹಾಗೂ ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ ಕೋರ್ಟ್​ ಸಂಕೀರ್ಣದಲ್ಲಿ ಶನಿವಾರ (ಜೂ.27) ತಪಾಸಣೆ ನಡೆಸಿದರು. 
ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್​ ಬೆದರಿಕೆಯ ಕರೆ ಎಂದು ತಿಳಿದುಬಂತು.
ಉಡುಪಿ ಕೋರ್ಟ್​ನ ಇ-ಮೇಲ್​ ಐಡಿಗೆ ಜೂ.26ರ ರಾತ್ರಿ 8:53ಕ್ಕೆ ಬಾಂಬ್​ ಬೆದರಿಕೆಯ ಸಂದೇಶ ಬಂದಿದ್ದು, ಶನಿವಾರ (ಜೂ.27) ಮಧ್ಯಾಹ್ನ 12 ಗಂಟೆಗೆ ಇ&ಮೇಲ್​ ಗಮನಿಸಲಾಗಿದೆ. ತಕ್ಷಣ ಪೊಲೀಸ್​ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಉಡುಪಿ ನಗರಠಾಣಾ ಪಿಎಸ್​ಐಗಳಾದ ಭರತೇಶ್​, ಈರಣ್ಣ, ಸಿಬ್ಬಂದಿ ಬಶೀರ್​ ಸೇರಿದಂತೆ ಇನ್ನಿತರ ಮಹಿಳಾ ಸಿಬ್ಬಂದಿ ಕೋರ್ಟ್​ಗೆ ಬಂದೋಬಸ್ತ್​ ಮಾಡಿದರು.
ನಿಲ್ಲದ ಕೋರ್ಟ್​ ಕಲಾಪ
ಕೋರ್ಟ್​ ಹಾಲ್​ನಲ್ಲಿ ಪೊಲೀಸರು, ಶ್ವಾನದಳ ತಪಾಸಣೆ ಆರಂಭಿಸಿದರೂ ನ್ಯಾಯಾಧೀಶರು ಪೀಠದಲ್ಲೇ ಕುಳಿತು, ಪರಿಶೀಲನೆಗೆ ಅನುವು ಮಾಡಿಕೊಟ್ಟರು. ವಕೀಲರು ಹಾಗೂ ಕಕ್ಷಿದಾರರನ್ನು ತಪಾಸಣೆಯ ವೇಳೆ ಕಲಾಪದ ಹಾಲ್​ನಿಂದ ಹೊರಗೆ ಕಳುಹಿಸಲಾಗಿತ್ತು. ಹುಸಿ ಬಾಂಬ್​ ಬೆದರಿಕೆ ಎಂದು ಸ್ಪಷ್ಟವಾದ ಬಳಿಕ ಕಲಾಪ ಮುಂದುವರಿಯಿತು.
ಕಳೆದ ಜೂ.21ರಂದೂ (ಭಾನುವಾರ ಸಂಜೆ) ಸಹ ಜಿಲ್ಲಾ ನ್ಯಾಯಾಲಾಯದ ಸಂಕೀರ್ಣದ ಕೋರ್ಟ್​ ಹಾಲ್​ ಹಾಗೂ ಶೌಚಾಲಯದಲ್ಲಿ 2+2 ಆರ್​ಡಿಎಕ್ಸ್​ ಬಾಂಬ್​ ಇಟ್ಟಿರುವುದಾಗಿ ಕೋರ್ಟ್​ನ ಇ-ಮೇಲ್​ ಐಡಿಗೆ ಸಂದೇಶ ಕಳುಹಿಸಲಾಗಿತ್ತು. ಮಾರನೆದಿನ (ಜೂ.22) ಮಧ್ಯಾಹ್ನ 12 ಗಂಟೆಗೆ ಪೊಲೀಸರು ಹಾಗೂ ಶ್ವಾನದಳ ತಪಾಸಣೆ ನಡೆಸಿ, ಇದೊಂದು ಹುಸಿ ಬಾಂಬ್​ ಬೆದರಿಕೆಯ ಕರೆ ಎಂದು ಸ್ಪಷ್ಟಪಡಿಸಿತ್ತು.

ಇ-ಮೇಲ್​ನಲ್ಲಿ ಏನಿದೆ..?

ದುರ್ಗಾ ಸ್ಟಾಲಿನ್​ ಅವರು ಪ್ರೋಪೆಟ್​ ಮಹಮ್ಮದ್​ ಅವರನ್ನು ನಿಂದಿಸಿದ್ದಾರೆ. ಹೀಗಾಗಿ 5 ಸಿಲಿಕಾನ್​ ಡೈನಮೇಟ್​ ಬಾಂಬ್​ಗಳನ್ನು ಉಡುಪಿ ಜಿಲ್ಲಾ ನ್ಯಾಯಾಲಯದ ರೆಕಾರ್ಡ್​ ರೂಮ್​ ಹಾಗೂ ಮೊದಲ ಮಹಡಿಯಲ್ಲಿರುವ ಇ-ಕೇಂದ್ರದಲ್ಲಿ ಇಡಲಾಗಿದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ಮುಸಲ್ಮಾನರಿಗೆ ಇಂದು ಪವಿತ್ರ ಶುಕ್ರವಾರ. ದುರ್ಗಾ ಸ್ಟಾಲಿನ್​ ಪ್ರಧಾನಿ ನರೇಂದ್ರ ಮೋದಿ ಅವರ ಸ್ಲೀಪರ್​ ಸೆಲ್​. ದ್ರಾವಿಡ ಕುಟುಂಬದ ಎಂ.ಕೆ. ಸ್ಟಾಲಿನ್​ ಹಾಗೂ ಉದಯನಿಧಿ ಅವರಿಗೆ ನಿಧಾನವಾಗಿ ವಿಷ ಪ್ರಾಷನ ಮಾಡುತ್ತಿದ್ದಾರೆ. ಹೀಗಾಗಿ ಎಂ.ಕೆ ಸ್ಟಾಲಿನ್​ ಅವರ ತಲೆ ಕೂದಲು ಉದುರಿ, ವಿಗ್​ ಹಾಕಿಕೊಳ್ಳುತ್ತಿದ್ದಾರೆ. ತಿರುಪರನಕುಂದ್ರಂನಲ್ಲಿರುವ ದರ್ಗಾವನ್ನು ಒಡೆದುಹಾಕಲು ಸಂಚು ರೂಪಿಸಲಾಗುತ್ತಿದೆ. ದುರ್ಗಾ ಸ್ಟಾಲಿನ್​ ಹಾಗೂ ಪ್ರೇಮಲತಾ ವಿಜಯಾಕಾಂತ್​ ಅವರು ಮೋದಿಯ ಈ ಆಸೆಯನ್ನು ಈಡೇರಿಸಲು ಯತ್ನಿಸುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಅದನ್ನು ಖಂಡಿಸಿಯೇ ನಾವು ನ್ಯಾಯಾಲಯಕ್ಕೆ ಬಾಂಬ್​ ಇಟ್ಟು ಸ್ಫೋಟಿಸಲಿದ್ದೇವೆ ಎಂದು ತಿಳಿಸಲಾಗಿದೆ.