ಉಡುಪಿ ಜಿಲ್ಲೆಯ ಶಿರ್ವದಲ್ಲಿ ಆಯೋಜಿಸಿದ್ದ ಕಥೊಲಿಕ್ ಸಭಾ ಉಡುಪಿ ಪ್ರದೇಶದ ವಾರ್ಷಿಕ ಮಹಾಸಭೆಯಲ್ಲಿ ಫ್ಲಾವಿಯಾ ಅಲ್ಬುಕರ್ಕ್ ಅವರಿಗೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಪುಸ್ತಕ ಪುರಸ್ಕಾರ ನೀಡಲಾಯಿತು. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ಮೆಲ್ವಿನ್ ಆರಾನ್ಹಾ, ಜಾನ್ಸನ್ ಡಿ'ಆಲ್ಮೇಡಾ, ಫರ್ಡಿನಾಂಡ್ ಗೊನ್ಸಾಲ್ವಿಸ್, ಚಾರ್ಲ್ಸ್ ಮಿನೇಜಸ್, ಜುಲಿಯಾನ್ ರೊಡ್ರಿಗಸ್, ಆಗ್ನೆಸ್ ಬಾಬೋರ್ಜಾ, ರೊಲ್ವಿನ್ ಆರಾನ್ಹಾ ಇತರರಿದ್ದರು.
* ಬಿಷಪ್ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅನಿಸಿಕೆ
* ಶಿರ್ವದಲ್ಲಿ ಉಡುಪಿ ಕಥೊಲಿಕ್ ಸಭಾ ವಾರ್ಷಿಕ ಸಭೆ
ಉಡುಪಿ: ಸಂಘಟನೆಗಳು ಸಮಾಜದ ಇಂದಿನ ಅಗತ್ಯತೆ ಗಮನದಲ್ಲಿಟ್ಟುಕೊಂಡು ಅದನ್ನು ಕಾರ್ಯಗತಗೊಳಿಸಲು ಹೆಜ್ಜೆ ಇಡಬೇಕಾಗಿದೆ. ಪರರ ಮುಖದಲ್ಲಿ ದೇವರನ್ನು ಕಾಣುವುದರ ಮೂಲಕ ಸಮಾಜದಲ್ಲಿ ಸೇವೆ ಮಾಡುವುದು ಮೊದಲ ಆದ್ಯತೆಯಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.
ಶಿರ್ವ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಭಾನುವಾರ (ಜೂ.14) ಆಯೋಜಿಸಿದ್ದ ಕಥೊಲಿಕ್ ಸಭಾ ಉಡುಪಿ ಪ್ರದೇಶದ ವಾರ್ಷಿಕ ಮಹಾಸಭೆ ಹಾಗೂ ದಿ.ಫ್ರಾನ್ಸಿಸ್ ದಾಂತಿ ಪುಸ್ತಕ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಯದ ಧ್ವನಿ
ರೋಜರಿ ಕ್ರೆಡಿಟ್ ಕೋ-&ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿ'ಆಲ್ಮೇಡಾ ಮಾತನಾಡಿ, ಸಮುದಾಯದ ಅಭಿವೃದ್ಧಿ, ಜಾಗೃತಿ ಮೂಡಿಸುವಲ್ಲಿ ಹಾಗೂ ಸಮುದಾಯಕ್ಕೆ ಅನ್ಯಾಯವಾದಾಗ ನ್ಯಾಯಕ್ಕಾಗಿ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸುವ ಕಥೊಲಿಕ್ ಸಭಾ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಫ್ಲಾವಿಯಾಗೆ ಸನ್ಮಾನ
ಕವಯಿತ್ರಿ ಫ್ಲಾವಿಯಾ ಅಲ್ಬುಕರ್ಕ್ ಅವರ 'ಸಖಿ ಸೂಚಿಸಿದ ಸೌಗಂಧ' ಕವನ ಸಂಕಲನ 2025ನೇ ಸಾಲಿನ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಸಭೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ವರದಿ, ವಾರ್ಷಿಕ ಮಹಾಸಭೆಯ ವರದಿ, ವಾರ್ಷಿಕ ಲೆಕ್ಕಪತ್ರ ಮಂಡನೆ, ಮಾನಸ ಸಂಸ್ಥೆ, ಸಶಕ್ತ ಸಮುದಾಯ ಸೇವಾ ಟ್ರಸ್ಟ್ನ ವರದಿ ಮಂಡಿಸಲಾಯಿತು. 2026 -27ನೇ ಸಾಲಿನ ಕಥೊಲಿಕ್ ಸಭೆಯ ಡೈರಕ್ಟರಿ ಬಿಡುಗಡೆ ಮಾಡಲಾಯಿತು. ದಿ. ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಿವೃತ್ತ ಅಧ್ಯಾಪಕ ಆಲ್ಫೋನ್ಸ್ ಡಿಸೋಜಾ ಅವರ ಸಣ್ಣ ಕಥೆಗಳ ಸಂಗ್ರಹ 'ಘಡಿತಾಚೆ ಬುಳ್ಬುಳೆ' ಪುಸ್ತಕ ಬಿಡುಗಡೆ ಮಾಡಲಾಯಿತು. ಅತ್ಯಧಿಕ ಸಹಾಯಧನ ಕೂಪನ್ ವಿತರಣೆ, ಆಮ್ಚೊ ಸಂದೇಶ್ ಜಾಹೀರಾತು ಹಾಗೂ ಚಂದಾದಾರರನ್ನು ಸಂಗ್ರಹಿಸಿದ ಸದಸ್ಯರಿಗೆ ಹಾಗೂ ಘಟಕ ಗುರುತಿಸಿ ಗೌರವಿಸಲಾಯಿತು. ಅತ್ಯಧಿಕ ಸದಸ್ಯರ ನೋಂದಾಯಿಸಿದ ಘಟಕ ಹಾಗೂ ವಲಯಗಳನ್ನು ಸನ್ಮಾನಿಸಲಾಯಿತು.
ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಐವನ್ ಡಿಸೋಜಾ ಆಗಮಿಸಿ ಶುಭ ಹಾರೈಸಿದರು.
ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಶಿರ್ವ ಚರ್ಚ್ನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಉಪಾಧ್ಯಕ್ಷ ಜುಲಿಯಾನ್ ರೊಡ್ರಿಗಸ್, ಘಟಕಾಧ್ಯಕ್ಷೆ ಆಗ್ನೆಸ್ ಬಾಬೋರ್ಜಾ, ಶಾಲೆಯ ಪ್ರಾಂಶುಪಾಲ ವಂ.ರೊಲ್ವಿನ್ ಆರಾನ್ಹಾ, ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ, ಕೋಶಾಧಿಕಾರಿ ಗ್ಯಾರಿಫೀಲ್ಡ್ ಉರ್ಬಾನ್ ಲೂವಿಸ್, ನಿಯೋಜಿತ ಅಧ್ಯಕ್ಷ ಲೂವಿಸ್ ಡಿಸೋಜಾ, ಸಹಕಾರ್ಯದರ್ಶಿ ಸೋನು ಸಿಕ್ವೇರಾ, ಸಹ ಕೋಶಾಧಿಕಾರಿ ಪ್ರತಿಮಾ ಡಿಸೋಜಾ, ದಾಂತಿ ಸ್ಮಾರಕ ಟ್ರಸ್ಟ್ನ ಸಂಚಾಲಕ ಆಲ್ಫೋನ್ಸ್ ಡಿಕೋಸ್ತಾ, ಚಾರ್ಲ್ಸ್ ದಾಂತಿ, ಮಾನಸ ಸಂಸ್ಥೆಯ ಅಧ್ಯಕ್ಷ ಜೋನ್ ಮಾರ್ಟಿಸ್, ವಲಯಾಧ್ಯಕ್ಷರಾದ ಜೊಯೇಲ್ ಆಲ್ಮೇಡಾ, ಶೈಲಾ ಡಿ ಆಲ್ಮೇಡಾ, ಜೆರಾಲ್ಡ್ ರೊಡ್ರಿಗಸ್, ಅಂತೋನಿ ಮಿರಾಂದಾ, ಜೋನ್ ಕಿರಣ್ ಲೂವಿಸ್, ಮಾಜಿ ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ, ಎಲ್ ರೋಯ್ ಕಿರಣ್ ಕ್ರಾಸ್ತಾ, ವಲೇರಿಯನ್ ಫೆರ್ನಾಂಡಿಸ್, ಡಾ. ಜೆರಾಲ್ಡ್ ಪಿಂಟೊಇತರರು ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಮೇಬಲ್ ಡಿಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಜುಲಿಯೆಟ್ ಡಿಸೋಜಾ ವಂದಿಸಿದರು.
"
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಆಗುತ್ತಿದ್ದು ಸಮುದಾಯವೂ ಸಹ ಅದೇ ನಿಟ್ಟಿನಲ್ಲಿ ಮುಂದುವರಿಯಬೇಕು. ಶಿಕ್ಷಣ ಸಂಸ್ಥೆಗಳು ಹಳೆಯ ಪದ್ಧತಿ ಕೈಬಿಟ್ಟು ಹೊಸ ಆವಿಷ್ಕಾರಗಳಿಗೆ ಹೊಂದಿಕೊಂಡು ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಬೇಕು. ಉತ್ತಮ ಶಾಲೆ ಮತ್ತು ಆಸ್ಪತ್ರೆಯ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ.
— ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ. ಉಡುಪಿ ಬಿಷಪ್.