ಕೊಕ್ಕಡ: ಗ್ರಾಮದ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಆಟಿಕೆಯಿರುವ ಗೋಣಿಚೀಲ ತೆಗೆಯಲು ಹೋದ ನಾಲ್ಕೂವರೆ ವರ್ಷದ ಬಾಲಕಿಗೆ ಹಾವು ಕಚ್ಚಿ ಅಸ್ವಸ್ಥಗೊಂಡಿದ್ದಾಳೆ.
ಮಲ್ಲಿಗೆಮಜಲು ಮಸೀದಿ ಅಧ್ಯಕ್ಷ ಸಿಯಾಬುದ್ದೀನ್-ಸೆಮಿಮ ದಂಪತಿ ಪುತ್ರಿ ಫಾತಿಮತ್ ಶಹಾದಿಯಾ ಅಸ್ವಸ್ಥಗೊಂಡಿದ್ದು, ಕೊಕ್ಕಡ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾಯದಿಂದ ಪಾರಾಗಿದ್ದಾಳೆ. ಬಾಲಕಿಗೆ ಕಚ್ಚಿದ್ದು ತೋಳ ಹಾವು ಎಂದು ತಿಳಿದು ಬಂದಿದೆ.
ಅಂಗನವಾಡಿ ಕಾರ್ಯಕರ್ತೆ ಸರಿತಾ ಬಿಎಲ್‌ಒ ಕರ್ತವ್ಯದ ನಿಮಿತ್ತ ಹೊರಗಡೆ ತೆರಳಿದ್ದರಿಂದ ಕೇಂದ್ರದಲ್ಲಿ ಅಡುಗೆ ಸಹಾಯಕಿ ಅಶ್ವಿತಾ ಮಾತ್ರ ಇದ್ದರು. ಅವರು ಮಕ್ಕಳ ಊಟ ತಯಾರಿಗೆಂದು ಅಡುಗೆ ಕೋಣೆಗೆ ತೆರಳಿದ ಸಂದರ್ಭ ಶಹಾದಿಯಾ ಮತ್ತು ಮತ್ತಿಬ್ಬರು ಬಾಲಕಿಯರು ಆಟವಾಡಲೆಂದು ಪಕ್ಕದ ಕೋಣೆಯಲ್ಲಿದ್ದ ಆಟಿಕೆಯಿರುವ ಗೋಣಿ ತೆಗೆಯಲು ಹೋದಾಗ ಶಹಾದಿಯಾಗೆ ಹಾವು ಕಚ್ಚಿದೆ.
ಅಡುಗೆ ಸಹಾಯಕಿ ಬಂದು ನೋಡಿದಾಗ ಮಗುವಿನ ಕೈಯಲ್ಲಿ ಕಚ್ಚಿರುವ ಗುರುತು ಕಂಡಿದ್ದು, ಅಲ್ಲೇ ಕಣಜ ಹುಳು ಹಾರುತ್ತಿದ್ದರಿಂದ ಅದು ಕಚ್ಚಿರಬಹುದೆಂದು ತಿಳಿದು ಪಾಲಕರಿಗೆ ಕರೆ ಮಾಡಿದ್ದಾರೆ. ಪಾಲಕರು ಪರಿಶೀಲಿಸಿದಾಗ ಆಟಿಕೆಯಿದ್ದ ಮೂಲೆಯಲ್ಲಿ ಹಾವು ಪತ್ತೆಯಾಗಿದೆ.