ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕೇಂದ್ರದ ಎಲ್‌ಕೆಜಿ, ಯುಕೆಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೋಟತಟ್ಟು ಪಿಡಿಒ ರವೀಂದ್ರ ರಾವ್ ದೀಪ ಬೆಳಗಿಸಿದರು. ಪ್ರಮುಖರಾದ ಶೇವಧಿ ಸುರೇಶ್ ಗಾಣಿಗ, ಎಂ.ಸುಬ್ರಾಯ ಆಚಾರ್ಯ, ಸುಮತಿ ಅಂಚನ್ ಇದ್ದರು.
ಕೋಟ: ಅಂಗನವಾಡಿ ಕೇಂದ್ರಗಳು ಮಗುವಿನ ಮನೋವಿಕಾಸದ ಕೇಂದ್ರಗಳಾಗಬೇಕು. ಆಗ ಮಾತ್ರ ಭವಿಷ್ಯಕ್ಕೆ ಮುನ್ನುಡಿ ಬರೆಯಲು ಸಾಧ್ಯ. ಈ ದಿಸೆಯಲ್ಲಿ ಕಲ್ಮಾಡಿ ಅಂಗನವಾಡಿ ಕೇಂದ್ರ ಅಭಿವೃದ್ಧಿಯತ್ತ ದಾಪುಗಾಲು ಇರಿಸಿದೆ ಎಂದು ಕೋಟತಟ್ಟು ಪಿಡಿಒ ರವೀಂದ್ರ ರಾವ್ ಹೇಳಿದರು.
ಕಾರಂತ ಥೀಂ ಪಾರ್ಕ್‌ನಲ್ಲಿರುವ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರ ಎಲ್‌ಕೆಜಿ, ಯುಕೆಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್‌ಕೆಜಿ, ಯುಕೆಜಿ ಕೇಂದ್ರವನ್ನು ಕಾರಂತ ಪ್ರತಿಷ್ಠಾನ ಸದಸ್ಯ ಎಂ.ಸುಬ್ರಾಯ ಆಚಾರ್ಯ ಉದ್ಘಾಟಿಸಿದರು. ಪೋಷಣ್ ಮಾಸಾಚರಣೆ ಅಂಗವಾಗಿ ಸೀಮಂತ ಕಾರ್ಯಕ್ರಮ, ಕೋಟ ಪಂಚವರ್ಣ ಸಂಘಟನೆಯಿಂದ ಪರಿಸರ ಜಾಗೃತಿಯ ಹಸಿರು ಹೆಜ್ಜೆ ಮೂಲಕ ಮಕ್ಕಳಿಗೆ ಗಿಡ ವಿತರಿಸಲಾಯಿತು. ದಾನಿಗಳ ಮೂಲಕ ಪಡೆದ ಸಮವಸ್ತ್ರವನ್ನು ಕೋಟ ಪಂಚವರ್ಣ ಸಂಘಟನೆ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಿತರಿಸಿದರು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ಶಿಲ್ಪಾ ರಾಜೇಶ್, ಕೋಟತಟ್ಟು ಪಂಚಾಯಿತಿ ಕಾರ್ಯದರ್ಶಿ ಸುಮತಿ ಅಂಚನ್ ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಕೇಂದ್ರದ ಶಿಕ್ಷಕಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಶೈಲಜಾ ಸಹಕರಿಸಿದರು.