ಸಾಂದರ್ಭಿಕ ಚಿತ್ರ  
ಉಡುಪಿ

ಆಂಧ್ರಪ್ರದೇಶದ ವ್ಯಕ್ತಿಯ ಕುತ್ತಿಗೆ ಇರಿದು ಕೊಲೆ

ಮಲ್ಪೆಯ ಬಾಬುತೋಟ ಧಕ್ಕೆ ಸಮೀಪ ಮಲಗಿದ್ದ ಆಂಧ್ರಪ್ರದೇಶ ಮೂಲದ ವೖದ್ಧರೊಬ್ಬರನ್ನು ದುಷ್ಕರ್ಮಿಗಳು ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರದಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಉಡುಪಿ: ಮಲ್ಪೆಯ ಬಾಬುತೋಟ ಧಕ್ಕೆ ಸಮೀಪ ಮಲಗಿದ್ದ ಆಂಧ್ರಪ್ರದೇಶ ಮೂಲದ ವೖದ್ಧ ಮೀನುಗಾರನೊಬ್ಬನನ್ನು ದುಷ್ಕರ್ಮಿಗಳು ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರದಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಮೃತರನ್ನು ಆಂಧ್ರ ಮೂಲದ ಪರಮೇಶಿ ಯಾನೆ ಪರಮ್‌ ವೇಲಿ (55) ಎಂದು ಗುರುತಿಸಲಾಗಿದೆ.

ಈತ ಕಳೆದ ಸುಮಾರು ಮೂರು ವರ್ಷಗಳಿಂದ ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಹೆಕ್ಕಿಕೊಂಡು ಜೀವನ ಸಾಗಿಸುತ್ತಿದ್ದ. ಮಲ್ಪೆಯ ಬಾಬುತೋಟ ಧಕ್ಕೆಯ ಬಳಿ ಗೋಡೌನ್‌ ಮಧ್ಯೆ ಸುಮಾರು 10 ಅಡಿ ಖಾಲಿ ಜಾಗದಲ್ಲಿ ಪರಮೇಶಿ ಕೂಡ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲಿ ಗೋಣಿ ಚೀಲ ಹಾಕಿಕೊಂಡು ಮಲಗುತ್ತಿದ್ದ. ಮಂಗಳವಾರ ಬೆಳಿಗ್ಗೆ 8:30 ಗಂಟೆಗೆ ಸ್ಥಳೀಯರೊಬ್ಬರು ಬೈಕ್‌ ಇಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಪರಮೇಶಿ ಗೋಣಿ ಚೀಲದ ಮೇಲೆ ಅಡ್ಡವಾಗಿ ಬಿದ್ದುಕೊಂಡಿದ್ದು, ಕುತ್ತಿಗೆಯ ಬಳಿಾುಂದ ತೀವ್ರ ರಕ್ತಸ್ರಾವವಾಗಿ ನೆಲದ ಮೇಲೆ ಹರೆದಿರುವುದು ಕಂಡುಬಂದಿದೆ.

ಯಾರೋ ದುಷ್ಕರ್ಮಿಗಳು ಯಾವುದೋ ಹಳೆಯ ದ್ವೇಷದಿಂದ ಕುತ್ತಿಗೆಯ ಭಾಗಕ್ಕೆ ಮಾರಕಾಸ್ತ್ರದಿಂದ ಇರಿದು ಕೊಲೆಗೈದಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.