ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡು ಬರುವ ಕಾವಿ ಆರ್ಟ್​. 
ಉಡುಪಿ

ಕಾದು ಕುಳಿತಿದೆ 'ಕಾವಿ' ಕಲೆ

* ಸರ್ಕಾರದ ಸಹಾಯ, ಸಹಕಾರದ ನಿರೀಕ್ಷೆ

* ಪುನರುಜ್ಜೀವನದ ಆಸೆಯಲ್ಲಿ ಪುರಾತನ ಆರ್ಟ್​

ಪ್ರಶಾಂತ ಭಾಗ್ವತ ಉಡುಪಿ
ಕಾಲನ ಸುಳಿಗೆ ಸಿಲುಕಿ ಅದೆಷ್ಟೋ ಬಗೆಯ ದೇಸೀಯ ಕಲೆಗಳು ಇನ್ನಿಲ್ಲದಂತೆ ನಾಶವಾಗಿದ್ದು, ಕರ್ನಾಟಕದ ಕರಾವಳಿಯ ಅಪ್ಪಟ ಕಲೆಯಾದ 'ಕಾವಿ ಆರ್ಟ್​' ಇನ್ನೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ನೂರಾರು ಕಲಾವಿದರ ಶ್ರಮದ ಫಲವಾಗಿ "ಕಾವಿ ಕಲೆ' ಅಲ್ಲಲ್ಲಿ ತನ್ನ ಕುರುಹು ತೋರಿಸುತ್ತಿದೆ.
ಪುನರುಜ್ಜೀವನದ ಆಸೆಯಲ್ಲಿರುವ ಈ ಕಲೆ, ಸರ್ಕಾರದ ಸಹಾಯ-ಸಹಕಾರಕ್ಕಾಗಿ ಕಾದು ಕುಳಿತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಮಂಗಳೂರಿನಲ್ಲಿ ಶುಕ್ರವಾರ (ಸೆ.18) ನಡೆಸುವ ಸಚಿವ ಸಂಪುಟದ ಸಭೆಯಲ್ಲಿ ತನ್ನ ಔನ್ಯತಕ್ಕೆ ಏನಾದರೊಂದು ಕ್ರಮವಾಗುವ ನಿರೀಕ್ಷೆಯಲ್ಲಿದೆ ಕಾವಿ ಕಲೆ.
ಜಿಎ ಟ್ಯಾಗ್​ ಪ್ರಯತ್ನ
ಸುಮಾರು 12, 13ನೇ ಶತಮಾನದಲ್ಲಿ ಕೊಂಕಣ ಕರಾವಳಿ ತೀರ ಪ್ರದೇಶಗಳಲ್ಲಿ ಕಾವಿ ಕಲೆಯು ಪ್ರವರ್ಧಮಾನಗೊಂಡಿತ್ತು. ದೇಸೀಯ ತಂತ್ರಗಾರಿಕೆಯೊಂದಿಗೆ ಕಟ್ಟಡ ನಿರ್ಮಾಣದಲ್ಲಿ ಬಳಸಲ್ಪಡುವ ಸ್ಥಳೀಯ ಕಲೆ ಇದಾಗಿದ್ದು, ಆ ಕಾಲದಲ್ಲಿ ಯಾವುದೇ ಕಟ್ಟಡ, ಮನೆಗಳು ಈ ಕಲೆಯಿಂದ ಹೊರತಾಗಿರಲಿಲ್ಲ. ಆದರೆ, ಕಟ್ಟಡ ಹಾಗೂ ಮನೆಗಳಿಗೆ ಸಿಮೆಂಟ್​ ಬಳಕೆ ಬಂದ ಬಳಿಕ ಈ ಕಲೆ ಅವಸಾನದತ್ತ ಸಾಗಿತು. ಹಲವು ಕಲಾವಿದರ ನಿರಂತರ ಪ್ರಯತ್ನದಿಂದಾಗಿ ಈ ಕಲೆಗೆ ಸದ್ಯದಲ್ಲಿಯೇ ಜಿಎ ಟ್ಯಾಗ್​ ಲಭಿಸುವ ಸಾಧ್ಯತೆಯೂ ಇದೆ.

ಏಕತೆಯ ಪ್ರತೀಕ

ಬಹತೇಕ ಕಲೆಗಳು ಧರ್ಮ ಅಥವಾ ಜಾತಿ-ಪಂಗಡ ಆಧಾರಿತವಾಗಿದ್ದು, ಈ ಕಲೆ ಮಾತ್ರ ಏಕತೆಯ ಪ್ರತೀಕವಾಗಿದೆ. ಮಠ-ಮಂದಿರ, ದೇಗುಲವಷ್ಟೇ ಅಲ್ಲದೆ ಮಸೀದಿ, ಚರ್ಚ್​, ಜಿನಾಲಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಕಾಣಬಹುದಾಗಿದೆ. ಕದಂಬರ ಮೂಲ ರಾಜಧಾನಿ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಈ ಕಲೆಯಿದೆ. 4-5 ಶತಮಾನದ ಹಿಂದೆ ಗೋವಾದ ಎಲ್ಲ ಚರ್ಚ್​ಗಳಲ್ಲಿ ಈ ಕಲೆಯಿತ್ತು. ಶಿರಸಿ ಮಾರಿಕಾಂಬಾ ದೇವಾಲಯವಂತೂ ಈಗಲೂ ಈ ಕಲೆಗೆ ಬಹುದೊಡ್ಡ ಉದಾಹರಣೆ. ಸಾಗರದ ಹಾರಿಗೆ ಜೈನ ಬಸದಿ, ಭಟ್ಕಳದ ಹಾಡುವಳ್ಳಿಯ ಜೈನ ಜಟ್ಟಿಗ ದೇಗುಲ ಹಾಗೂ ಕಾರವಾರದ ಮಸೀದಿಯಲ್ಲೂ ಕಾವಿ ಕಲೆ ಇತ್ತು.   
ಹಾವಂಜೆಯಲ್ಲಿ ಕ್ಲಸ್ಟರ್​
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆ ಎಂಬ ಪುಟ್ಟ ಹಳ್ಳಿಯಲ್ಲಿ ಕಾವಿ ಕಲೆಗೆ ಸಂಬಂಧಿಸಿ ಕ್ಲಸ್ಟರ್​ ನಿರ್ಮಾಣವಾಗುತ್ತಿದೆ. ನೂರಾರು ಕಲಾವಿದರು ಕಾವಿ ಆರ್ಟ್​ ಫೌಂಡೇಷನ್​ ಸಹಕಾರ ಸಂಘ ಎಂಬ ಸೊಸೈಟಿಯ ಮೂಲಕ ಕಲೆಯ ಉಳಿವಿಗೆ ಶ್ರಮಿಸುತ್ತಿದ್ದಾರೆ. ಕರುನಾಡಿನ ಹೆಮ್ಮೆಯ ಕಲೆ ಇದಾಗಿದ್ದು, ಹಲವಾರು ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲದೆ ರಾಷ್ಟ್ರಪತಿ ಭವನದಲ್ಲೂ ಇತ್ತೀಚಿಗೆ ಪ್ರದರ್ಶನ ಕಂಡು ಶ್ಲಾಘನೆಗೆ ಒಳಗಾಗಿದೆ. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಕಲೆಯ ಬಹುದೊಡ್ಡ ಕಲಾಕೃತಿಗಳು ರಚಿಸಲ್ಪಟ್ಟಿದ್ದು, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಕರಾವಳಿಯ ಪ್ರವಾಸೋದ್ಯಮಕ್ಕೂ ಪೂರಕ

ಕರ್ನಾಟಕ ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವ ಈ ವಿಶಿಷ್ಟ ಕಲೆಗೆ ಸರ್ಕಾರದಿಂದ ಮಾನ್ಯತೆ ಲಭಿಸಬೇಕಿದೆ. ಸ್ಥಳೀಯ ವಿವಿಧ ಉದ್ಯಮ ಉತ್ತೇಜಿಸಿ ಪ್ರವಾಸೋದ್ಯಮಕ್ಕೂ ಈ ಕಲೆ ವಿಶಿಷ್ಟ ಕೊಡುಗೆ ನೀಡಬಲ್ಲದು. ಚನ್ನಪಟ್ಟಣ ಗೊಂಬೆ, ಮೈಸೂರು ಚಿತ್ರಕಲೆ ಹಾಗೂ ಬೀದರ್​ನ ಬಿದರಿ ಕಲೆಗಳು ರಾಷ್ಟ್ರೀಯ ಭಾವೈಕ್ಯ ಮತ್ತು ಸಮೂಹ ಜೀವನ ಸಾರುವ ಸಂಸ್ಕೃತಿಯ ಭಾಗವಾಗಿದೆ. ಅದರಂತೆ ಕಾವಿ ಕಲೆಗೂ ಸಹ ಸಾಕಷ್ಟು ಸಹಕಾರ ಸಿಗಬೇಕಿದೆ. ಆಯಾ ಜಿಲ್ಲೆಯಗಳಲ್ಲಿ ಕ್ರಾಫ್ಟ್ ಕ್ಲಸ್ಟರ್​ ಇರುವಂತೆ ಕಾವಿ ಕಲೆಗೂ ಸಹ ಕರಾವಳಿ ಜಿಲ್ಲೆಗಳಲ್ಲಿ ಕ್ರಾಫ್ಟ್ ಕ್ಲಸ್ಟರ್​ ರಚನೆ ಹಾಗೂ ಉದ್ಯೋಗಾವಕಾಶ ಲಭಿಸುವಂತಾಗಲು ಸರ್ಕಾರ ತರಬೇತಿಯನ್ನೂ ಆಯೋಜಿಸಲು ಕ್ರಮ ಕೈಗೊಳ್ಳಬೇಕಿದೆ. 
"

ಐದು ಶತಮಾನಗಳಷ್ಟು ಹಳೆಯದಾದ ಕಾವಿ ಕಲೆಯು ಕರಾವಳಿ ಭಾಗದ 550ಕ್ಕೂ ಅಧಿಕ ಪುರಾತನ ಕಟ್ಟಡಗಳಲ್ಲಿ ಕಂಡುಬರುತ್ತದೆ. ಅವುಗಳ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕಾಗಿ ಸರ್ಕಾರ ಉತ್ತೇಜನ ಕೊಟ್ಟು ತರಬೇತಿ ನೀಡಿದರೆ ಸಾಕಷ್ಟು ಕಲಾವಿದರಿಗೆ ಉದ್ಯೋಗಾವಕಾಶವೂ ಲಭಿಸಲಿದೆ. ಅಲ್ಲದೆ, ಸ್ಥಳೀಯ ಕಲೆಯೊಂದರ ಪ್ರಚಾರ ಜಾಗತಿಕ ಮಟ್ಟದಲ್ಲಿ ಆಗಲು ಸಾಧ್ಯವಿದೆ. ಕಾವಿ ಕಲೆಯನ್ನು ಬೆಳೆಸಲು ಕಾವಿ ಆರ್ಟ್​ ಫೌಂಡೇಷನ್​ ಕಲಾವಿದರ ಸಹಕಾರಿ ಸಂಘದ ಮೂಲಕ ಸರ್ಕಾರಿ ಕನ್ನಡ ಶಾಲೆಗಳಲ್ಲಿ 'ಕನ್ನಡ ಶಾಲೆಗಳಲ್ಲಿ ಕಾವಿ ಕಲೆಯ ಕಿಶೋರ' (ಕಕಾಕಿ) ಎಂಬ ಸರಣಿ ಕಾರ್ಯಾಗಾರ ನಡೆಸುತ್ತಿದ್ದೇವೆ.