ಸೋಮವಾತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬೆಳ್ತಂಗಡಿಯ ಹಳೇ ಸೇತುವೆ 
ಉಡುಪಿ

ಇತಿಹಾಸ ಪುಟ ಸೇರಲಿದೆ ಪುರಾತನ ಬ್ರಿಡ್ಜ್

ಮನೋಹರ್ ಬಳಂಜ ಬೆಳ್ತಂಗಡಿ
ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಎಪ್ಪತ್ತು ವರ್ಷಗಳ ಇತಿಹಾಸ ಹೊಂದಿರುವ ಬೆಳ್ತಂಗಡಿಯ ಹಳೇ ಸೇತುವೆ ಇತಿಹಾಸದ ಪುಟ ಸೇರಲಿದೆ.
ಮುಖ್ಯಹೆದ್ದಾರಿ ಬದಿ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಮತ್ತೊಂದು ಸೇತುವೆ ನಿರ್ಮಿಸುವುದಕ್ಕಾಗಿ ಹಳೇ ಸೇತುವೆ ತೆರವುಗೊಳಿಸಲಾಗುತ್ತಿದೆ. ಬೆಳ್ತಂಗಡಿಗೆ ಬೇರೆ ಬೇರೆ ಭಾಗಗಳನ್ನು ಬೆಸೆಯುವ ಕೊಂಡಿಯಾಗಿ ಈ ಸೇತುವೆ ಕಾರ್ಯನಿರ್ವಹಿಸುತ್ತಿತ್ತು.
ಮುಖ್ಯ ಹೆದ್ದಾರಿಯ ಜತೆಗೆ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಗಳು ನಿರ್ಮಾಣವಾಗುತ್ತಿದ್ದು, ಈಗಾಗಲೇ ಮುಖ್ಯ ಸೇತುವೆ ಹಾಗೂ ಒಂದು ಬದಿಯ ಸರ್ವೀಸ್ ರಸ್ತೆಯ ಸೇತುವೆಯ ಕಾಮಗಾರಿ ಪೂರ್ಣಗೊಂಡಿದೆ. ಮತ್ತೊಂದು ಸೇತುವೆ ನಿರ್ಮಿಸಬೇಕಾದರೆ ಹಳೇ ಸೇತುವೆ ತೆರವು ಮಾಡಬೇಕಾಗಿದೆ. ಬೆಳ್ತಂಗಡಿ ನಗರ ಹಾಗೂ ಲಾಯಿಲ ಎರಡೂ ಕಡೆಯಲ್ಲೂ ಹಳೇ ಸೇತುವೆ ಸಂಪರ್ಕ ರಸ್ತೆಗಳು ಇಳಿಜಾರಿನಿಂದ ಕೂಡಿದ್ದು, ಹೊಸ ಸೇತುವೆ ನಿರ್ಮಾಣದಿಂದ ಇಳಿಜಾರು ಸಮಸ್ಯೆ ಬಗೆಹರಿಯಲಿದೆ.
ಪ್ರಸ್ತುತ ಬೆಳ್ತಂಗಡಿ ಭಾಗದಿಂದ ಲಾಯಿಲ ಕಡೆಗೆ ತೆರಳುವ ವಾಹನಗಳು ಹಳೇ ಸೇತುವೆಯಲ್ಲಿ ಸಾಗುತ್ತಿದ್ದು, ಬೆಳ್ತಂಗಡಿ ನಗರಕ್ಕೆ ಆಗಮಿಸುವ ವಾಹನಗಳು ಹೊಸ ಸೇತುವೆ ಮೂಲಕ ಸಂಚರಿಸುತ್ತಿವೆ. ಎರಡೂ ಬದಿಯ ವಾಹನಗಳು ಹೊಸ ಸೇತುವೆ ಮೇಲೆ ಸಂಚಾರ ಆರಂಭಿಸಿದ ಬಳಿಕ ಹಳೇ ಸೇತುವೆ ಕೆಡವಲಾಗುತ್ತದೆ.

ಕಾಮಗಾರಿ ಬಾಕಿಯಿರುವ ಪ್ರದೇಶಗಳು

ಜೂನ್‌ನೊಳಗೆ ಕಾಮಗಾರಿ ಮುಗಿಸುವ ಗುರಿಯೊಂದಿಗೆ ಭರದಿಂದ ಕಾಮಗಾರಿ ನಡೆಯುತ್ತಿದೆ. ಪುಂಜಾಲಕಟ್ಟೆ- ಚಾರ್ಮಾಡಿ ಹೆದ್ದಾರಿ ಕಾಮಗಾರಿ ವೇಗವಾಗಿ ಸಾಗುತ್ತಿದ್ದು ಪೂರ್ಣಗೊಳ್ಳುವ ಹಂತ ತಲುಪಿದೆ. ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಜಂಕ್ಷನ್ ಪ್ರದೇಶಗಳಲ್ಲಿ ಕಾಮಗಾರಿ ಬಾಕಿ ಇವೆ. ಟೆಂಡರ್ ಅವಧಿಯ ಪ್ರಕಾರ 2026ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಯಬೇಕಿದ್ದು, ಜೂನ್ ಬಳಿಕ ಮಳೆಯಿಂದ ಕಾಮಗಾರಿ ನಡೆಸುವುದು ಕಷ್ಟವಾದ್ದರಿಂದ ಬಹುತೇಕ ಕಾಮಗಾರಿಗಳನ್ನು ಜೂನ್ ಅಂತ್ಯದೊಳಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

1957ರಲ್ಲಿ ಸೇತುವೆ ನಿರ್ಮಾಣ

ಎಪ್ಪತ್ತು ವರ್ಷಗಳ ಹಿಂದೆ ನಿರ್ಮಿಸುರುವ ಈ ಹಳೇ ಸೇತುವೆಯ ನಾಲ್ಕು ಮೂಲೆಗಳಲ್ಲಿ ಕಂಬಗಳನ್ನು ಅಳವಡಿಸಿ ಅದರ ಮೇಲೆ ಅಶೋಕ ಸ್ತಂಭ ಅಳವಡಿಸಲಾಗಿದೆ. ಕಂಬದಲ್ಲಿರುವ ಅಮೃತ ಶಿಲೆಯ ಮಾಹಿತಿ ಪ್ರಕಾರ ಮೈಸೂರು ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಎಚ್.ಕೆ.ವೀರಣ್ಣ ಗೌಡ 1957ರ ಜುಲೈ 8ರಂದು ಸೇತುವೆ ಉದ್ಘಾಟಿಸಿದ್ದರು. ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಪ್ರದೇಶ ಸಂಪರ್ಕಿಸುವ ದೃಷ್ಟಿಯಿಂದ ಸೋಮಾವತಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲಾಗಿತ್ತು. ಕೆಲವು ಸಮಸ್ಯೆಗಳ ಹೊರತುಪಡಿಸಿ ಸೇತುವೆ ಇನ್ನೂ ಗಟ್ಟಿಯಾಗಿಯೇ ಇರುವುದು ವಿಶೇಷ.

ಸರ್ವೀಸ್ ರಸ್ತೆಯ ನಿರ್ಮಾಣಕ್ಕಾಗಿ ಹೊಸ ಸೇತುವೆ ನಿರ್ಮಾಣಗೊಳ್ಳಬೇಕಿರುವುದರಿಂದ ಬೆಳ್ತಂಗಡಿಯ ಹಳೇ ಸೇತುವೆ ತೆರವುಗೊಳಿಸಿ ಅಲ್ಲಿಯೇ ಹೊಸ ಸೇತುವೆ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಜೂನ್ ಒಳಗೆ ಬಹುತೇಕ ಕಾಮಗಾರಿ ಮುಗಿಸಬೇಕಿದ್ದು ವೇಗವಾಗಿ ಕೆಲಸಗಳು ನಡೆಯುತ್ತಿವೆ.