ಹಿರಿಯ ಕೃಷಿಕ ಬಾಳಪ್ಪ ಪೂಜಾರಿ ಬಂಬಿಲದೋಳ ಕಾರ್ಯಾಗಾರ ಉದ್ಘಾಟಿಸಿದರು. ಇಂದಿರಾ ಬಿ.ಕೆ., ವಸಂತ ಶೆಟ್ಟಿ, ಡಾ.ನಾಗರಾಜ್ ಎನ್.ಆರ್. ಮೊದಲಾದವರಿದ್ದರು.
ಕಡಬ: ವೈಜ್ಞಾನಿಕ ಸಂಶೋಧನೆಯ ಮೂಲಕ ಕೃಷಿಕರ ಹಿತ ಕಾಯುವ ಕೆಲಸವನ್ನು ಸಿಪಿಸಿಆರ್‌ಐ ಮಾಡುತ್ತಿದೆ. ಕೃಷಿಕರ ಬಳಿಗೆ ಬಂದು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡುವ ಕಾರ್ಯ ಶ್ಲಾಘನೀಯ ಎಂದು ಕಡಬ ತಾಲೂಕು ಕೃಷಿಕ ಸಮಾಜದ ನಿರ್ದೇಶಕ, ಹಿರಿಯ ಕೃಷಿಕ ಬಾಳಪ್ಪ ಪೂಜಾರಿ ಬಂಬಿಲದೋಳ ಹೇಳಿದರು.
ಪಾಲ್ತಾಡಿ ಗ್ರಾಮದ ಮಂಜುನಾಥನಗರ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ವಿಟ್ಲ ಸಿಪಿಸಿಆರ್‌ಐ ಪ್ರಾಂತೀಯ ಕ್ಷೇತ್ರ ವತಿಯಿಂದ ಸಿದ್ಧಿವಿನಾಯಕ ಸೇವಾ ಸಂಘ ಮಂಜುನಾಥನಗರ ಸಹಯೋಗದಲ್ಲಿ, ಕೃಷಿ ಉಳಿಸಿ ಅಭಿಯಾನ ಅಂಗವಾಗಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಮಾತನಾಡಿದರು. ರೈತರೊಂದಿಗೆ ನೇರ ಸಂವಾದ, ಪ್ರಾತ್ಯಕ್ಷಿಕೆ ಹಾಗೂ ತಾಂತ್ರಿಕ ಸಲಹೆ ಮಾಹಿತಿ ಕಾರ್ಯಾಗಾರ ನಡೆಯಿತು.
ಸಿಪಿಸಿಆರ್‌ಐ ಹಿರಿಯ ವಿಜ್ಞಾನಿ ಡಾ.ನಾಗರಾಜ್ ಎನ್.ಆರ್., ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ.ಭವಿಷ್ಯಾ, ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ ಶಿವಪ್ರಕಾಶ್ ಮಾಹಿತಿ ನೀಡಿದರು. ರೈತರಿಗೆ ಟ್ರೈಕೋಡರ್ಮವನ್ನು ಸಿಪಿಸಿಆರ್‌ಐ ವತಿಯಿಂದ ವಿತರಿಸಲಾಯಿತು.
ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ, ನಿರ್ದೇಶಕ ಸುರೇಶ್ ಬಂಬಿಲದೋಳ, ಸವಣೂರು ಕಾಣಿಯೂರು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಗಿರಿಶಂಕರ ಸುಲಾಯ, ಸವಣೂರು ಗ್ರಾ.ಪಂ. ಮಾಜಿ ಸದಸ್ಯರಾದ ಹರಿಕಲಾ ರೈ, ತಾರಾನಾಥ ಬೊಳಿಯಾಲ, ದಿವಾಕರ ಬಂಗೇರ ಬೊಳಿಯಾಲ, ಸಿದ್ಧಿವಿನಾಯಕ ಸೇವಾ ಸಂಘದ ಮಾಜಿ ಅಧ್ಯಕ್ಷ ಈಶ್ವರ ಕೆ.ಎಸ್, ಸಂಜೀವ ಗೌಡ ಪಾಲ್ತಾಡಿ, ಶ್ರೀಧರ ಗೌಡ ಅಂಗಡಿಹಿತ್ಲು, ವಿನಯಚಂದ್ರ ಕೆಳಗಿನಮನೆ, ಸಂಜೀವಿನಿ ಒಕ್ಕೂಟದ ಎಂಬಿಕೆ ಗೀತಾ,ಪಶು ಸಖಿ ಹೇಮಲತಾ, ರೈತರು ಉಪಸ್ಥಿತರಿದ್ದರು. ಪ್ರವೀಣ್ ಚೆನ್ನಾವರ ಸ್ವಾಗತಿಸಿ, ನಿರೂಪಿಸಿದರು.
ತಳಿಗಳಲ್ಲಿ ಶತಮಂಗಳಕ್ಕೆ ಹೆಚ್ಚಿನ ಬೇಡಿಕೆ
ಸಿಪಿಸಿಆರ್‌ಐ ಹಿರಿಯ ವಿಜ್ಞಾನಿ ಡಾ.ನಾಗರಾಜ್ ಎನ್.ಆರ್. ಮಾತನಾಡಿ, ಕೃಷಿಕರ ಆದಾಯೋತ್ಪನ್ನ ಹೆಚ್ಚಿಸುವ ನಿಟ್ಟಿನಲ್ಲಿ ಸಿಪಿಸಿಆರ್‌ಐ ಇದುವರೆಗೆ ಸುಮಾರು 12 ತಳಿಗಳನ್ನು ಬಿಡುಗಡೆ ಮಾಡಿದೆ. 2016ರಲ್ಲಿ ಬಿಡುಗಡೆಯಾದ ಶತಮಂಗಳ ತಳಿಗೆ ಹೆಚ್ಚಿನ ಬೇಡಿಕೆ ಇದೆ. ಇದು ಮಧ್ಯಮ ಎತ್ತರ ತಳಿಯಾಗಿದ್ದು, 2ರಿಂದ ಎರಡೂವರೆ ವರ್ಷಕ್ಕೆ ಹಿಂಗಾರ ಬಿಡುತ್ತದೆ. ಕರಾವಳಿಯ ಚಾಲಿ ಅಡಿಕೆ ಮತ್ತು ಮಲೆನಾಡಿನ ಕೆಂಪುಅಡಿಕೆ ವರ್ಗಕ್ಕೂ ಈ ತಳಿ ಹೊಂದಿಕೊಳ್ಳುತ್ತದೆ. ಪ್ರಮಾಣೀಕೃತ ನರ್ಸರಿಗಳಿಂದ ಉತ್ತಮ ಗಿಡಗಳನ್ನು ಪಡೆದುಕೊಂಡು ಕೃಷಿ ಮಾಡಬೇಕು ಎಂದರು.