ಉಡುಪಿ ಪೊಲೀಸ್​ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಸಹಕಾರದಿಂದ ಹೊಸಬೆಳಕು ಆಶ್ರಮದಿಂದ ಪುತ್ರನೊಂದಿಗೆ ತೆಲಂಗಾಣಕ್ಕೆ ತೆರಳಿದ ರಂಗಮ್ಮ. ರೋಶನ್​ ಕೆ., ನಯನಾ, ತನುಲಾ ತರುಣ್​ ಇದ್ದರು. 
ಉಡುಪಿ

ಕುಟುಂಬದೊಂದಿಗೆ ಮರುಸೇರ್ಪಡೆಯಾದ ವೃದ್ಧೆ

* ಅಸಹಾಯಕ ಸ್ಥಿತಿಯಲ್ಲಿದ್ದ ತೆಲಂಗಾಣದ ಮಹಿಳೆ

* ಸಹಕರಿಸಿದ ಪೊಲೀಸ್​ ಅಧಿಕಾರಿಗಳು

ಉಡುಪಿ: ಪತಿಯ ನಿಧನದಿಂದ ಒಬ್ಬಂಟಿಯಾಗಿ ಹಾಗೂ ಮಕ್ಕಳಿಂದಲೂ ಪರಿತ್ಯಕ್ತಳಾಗಿ ಆದಿ ಉಡುಪಿ ಪರಿಸರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ತೆಲಂಗಾಣ ರಾಜ್ಯದ ವೃದ್ಧೆಯನ್ನು ಅವಳ ಕುಟುಂಬಕ್ಕೆ ಸೇರಿಸುವಲ್ಲಿ ಉಡುಪಿ ಪೊಲೀಸರು ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಆದಿ ಉಡುಪಿಯ ರಸ್ತೆ ಬದಿಯಲ್ಲಿ ಅಸಹಾಯಕಳಾಗಿ ನಿಂತಿದ್ದ ರಂಗಮ್ಮ (62) ಅವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಸಹಕಾರದಲ್ಲಿ ಉಡುಪಿ ಮಹಿಳಾ ಪೊಲೀಸ್​ ಠಾಣೆಯ ಸಿಬ್ಬಂದಿ ರಕ್ಷಿಸಿ, ತಾತ್ಕಾಲಿಕ ಆಶ್ರಯಕ್ಕಾಗಿ ನಿಟ್ಟೂರಿನಲ್ಲಿದ್ದ ಸಖಿ ಸೆಂಟರ್​ಗೆ ದಾಖಲಿಸಿದ್ದರು.
ಸದರಿ ಪ್ರಕರಣದ ಕುರಿತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಸಖಿ ಸೆಂಟರ್​ಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ವೃದ್ಧೆಯು, ತನ್ನ ಹೆಸರು ರಂಗಮ್ಮ ಕೋಂ. ಮಾಂಗ್ಯಾ ಎಂದು ತಿಳಿಸಿ, ಪತಿ ನಿಧನರಾಗಿರುವುದಾಗಿ ಹಾಗೂ ಭದ್ರಮ್ಮ ಮತ್ತು ಸುಮನ್​ ಎಂಬ ಇಬ್ಬರು ಮಕ್ಕಳಿದ್ದಾರೆಂದು ಮಾಹಿತಿ ನೀಡಿದರು. ತನ್ನ ಮೂಲ ನಿವಾಸ ನಗರಂ ಕಾಲೋನಿ, ತೆಲಂಗಾಣವಾಗಿದೆ. ಎರಡು ವರ್ಷದಿಂದ ಮಕ್ಕಳೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ತಿಳಿಸಿದ್ದರು.
ರಂಗಮ್ಮ ಅವರಿಗೆ ಆಶ್ರಯವಿಲ್ಲದ್ದರಿಂದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯ ಸೂಚನೆಯಂತೆ ಹಾಗೂ ಅವರ ಸಂಬಂಧಿಕರು ಪತ್ತೆಯಾಗುವವರೆಗೆ ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಲಾಗಿತ್ತು. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕ ರೋಶನ್​ ಕೆ. ಹಾಗೂ ಆಪ್ತ ಸಮಾಲೋಚಕಿ ನಯನಾ ಅವರು ಈ ಪ್ರಕ್ರಿಯೆ ನೆರವೇರಿಸಿದ್ದರು. ಬಳಿಕ, ರಂಗಮ್ಮ ಅವರ ಮಕ್ಕಳನ್ನು ಪತ್ತೆಹಚ್ಚುವಂತೆ ಉಡುಪಿ ನಗರ ಪೊಲೀಸ್​ ಠಾಣೆಗೆ ಮನವಿ ಮಾಡಲಾಗಿತ್ತು.
ಈ ಪ್ರಕರಣವನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸುವಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಅವರ ಮಾರ್ಗದರ್ಶನ ಹಾಗೂ ಮಣಿಪಾಲ ಪೊಲೀಸ್​ ನಿರೀಕ್ಷಕ ಮಹೇಶ್​ ಪ್ರಸಾದ್​ ಅವರ ಸಹಕಾರ ಮಹತ್ವದ್ದಾಗಿತ್ತು.

ಪ್ರೀತಿಯಿಂದ ನೋಡಿಕೊಳ್ಳುವುದಾಗಿ ವಾಗ್ದಾನ

ಉಡುಪಿ ನಗರ ಪೊಲೀಸ್​ ಠಾಣೆಯ ಎಎಸ್​ಐ ವಿಜಯ್​ ಹಾಗೂ ಸಿವಿಲ್​ ಪೊಲೀಸ್​ ಕಾನ್​ಸ್ಟೇಬಲ್​ ಹನುಮಂತಪ್ಪ ವಿಭೂತಿ ಅವರು ರಂಗಮ್ಮ ನೀಡಿದ್ದ ವಿಳಾಸದ ಆಧಾರದಲ್ಲಿ ತೆಲಂಗಾಣಕ್ಕೆ ತೆರಳಿ ಮಗ ಸುಮನ್​ ವಿಳಾಸ ಪತ್ತೆ ಹಚ್ಚಿದರು. ಅವರನ್ನು ಉಡುಪಿಗೆ ಕರೆತಂದು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಹಾಜರುಪಡಿಸಿದರು. ಅವರಿಗೆ "ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯಿದೆ-2007'ರ ಕುರಿತು ಮಾಹಿತಿ ನೀಡಿ, ತಾಯಿಯನ್ನು ಗೌರವದಿಂದ ಪಾಲನೆ ಮಾಡುವಂತೆ ಕಾನೂನು ಸಲಹೆ ನೀಡಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಸುಮನ್​, ಇನ್ನು ಮುಂದೆ ತಾಯಿಯನ್ನು ಪ್ರೀತಿಯಿಂದ ಹಾಗೂ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇಂತಹ ಪರಿಸ್ಥಿತಿ ಮತ್ತೆ ಉಂಟಾಗದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತೇನೆ ಎಂದು ವಾಗ್ದಾನ ನೀಡಿದರು.
"

ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪುತ್ರ ಸುಮನ್​ ನೀಡಿದ ಭರವಸೆ ಹಿನ್ನೆಲೆಯಲ್ಲಿ ಹೊಸ ಬೆಳಕು ಆಶ್ರಮದಿಂದ ರಂಗಮ್ಮಅವರ ಬಿಡುಗಡೆಗೊಳಿಸಿ ಸುರಕ್ಷಿತವಾಗಿ ತೆಲೆಂಗಾಣಕ್ಕೆ ಕಳುಹಿಸಲಾಯಿತು. ಪ್ರಕರಣದ ಕಾನೂನು ಪ್ರಕ್ರಿಯೆಯ ನಡೆಸಿದ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ, ನಮ್ಮ ಪೊಲೀಸ್​ ಅಧಿಕಾರಿಗಳು ಹಾಗೂ ವೃದ್ಧೆಗೆ ತಾತ್ಕಾಲಿಕ ಆಶ್ರಯ ಹಾಗೂ ಆರೈಕೆ ಒದಗಿಸಿದ ಹೊಸ ಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್​ ಅವರ ಸಹಕಾರದಿಂದ ಪ್ರಕರಣ ಯಶಸ್ವಿಯಾಗಿ ಇತ್ಯರ್ಥಗೊಂಡಿದೆ.

— ಹರಿರಾಮ್​ ಶಂಕರ್​. ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ.