ಮೂರು ದಿನದ ಹಿಂದೆ ಬಾವಿಯೊಳಗೆ ಬಿದ್ದು ನಿತ್ರಾಣಗೊಂಡಿದ್ದ ಶ್ರೀನಿವಾಸ ಆಚಾರ್ಯ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಮೇಲಕ್ಕೆ ತರುತ್ತಿರುವುದು. 
ಉಡುಪಿ

ಬಾವಿಗೆ ಬಿದ್ದ ವೃದ್ಧ, ಸಾವು ಗೆದ್ದ!

* ಮೂರು ದಿನ ಹಗ್ಗ ಹಿಡಿದು ನಿಂತಿದ್ದ ಶ್ರೀನಿವಾಸ

* ಜೀವ ಉಳಿಸಿಕೊಳ್ಳಲು ದಿನವೂ ಹರಸಾಹಸ

ಉಡುಪಿ: ಬಾವಿಯಲ್ಲಿ ಬಿದ್ದು ಮೂರು ದಿನವಾಗಿದ್ದರೂ ಸಹ ವೃದ್ಧರೊಬ್ಬರು ಪವಾಡದ ರೀತಿಯಲ್ಲಿ ಬದುಕಿಬಂದ ಘಟನೆ ಆದಿಉಡುಪಿಯ ಕಂಬಳಕಟ್ಟೆ ಎಂಬಲ್ಲಿ ಸಂಭವಿಸಿದೆ. ಕಂಬಳಕಟ್ಟೆಯ ನಿವಾಸಿ ಶ್ರೀನಿವಾಸ ಆಚಾರ್ಯ (62), ಇಪ್ಪತ್ತು ಅಡಿ ಆಳದ ನೀರಿರುವ ಬಾವಿಗೆ ಬಿದ್ದವರಾಗಿದ್ದು, ಸಾವು-ಬದುಕಿನ ಪ್ರಯಾಸದ ಹೋರಾಟದಿಂದ ಜೀವ ಉಳಿಸಿಕೊಂಡಿದ್ದಾರೆ.

ಆಯತಪ್ಪಿ ಬಿದ್ದರು

ಒಬ್ಬಂಟಿಗರಾದ ಶ್ರೀನಿವಾಸ ಆಚಾರ್ಯ ತನ್ನ ಮನೆಯ ಮುಂದೆಯೇ ಇದ್ದ ಬಾವಿಗೆ ಮರದ ಎಲೆಗಳು ಬಿದ್ದು, ಅವು ಪಂಪ್​ಸೆಟ್​ನ ಫುಟ್​ಬಾಲ್​ಗೆ ಸಿಲುಕಿದ್ದರಿಂದ ನೀರು ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ಕಳೆದ ಶನಿವಾರ ಸಂಜೆ ಫುಟ್​ಬಾಲ್​ ಪೈಪ್​ಗೆ ಕಟ್ಟಿದ್ದ ಹಗ್ಗ ಮೇಲಕ್ಕೆತ್ತುವಾಗ ಲಡ್ಡಾಗಿದ್ದ ಹಗ್ಗ ತುಂಡಾಯಿತು. ಅದರಿಂದ ಆಯತಪ್ಪಿ ಅವರು ಬಾವಿಗೆ ಬಿದ್ದಿದ್ದರು.
ಯಾರಿಗೂ ಕೇಳಲಿಲ್ಲ ಆರ್ತನಾದ:
ಬಾವಿಯ ನೀರಿನಲ್ಲಿ ಬಿದ್ದು ಮುಳುಗತೊಡಗಿದ ಅವರು ಜೀವ ಉಳಿಸಿಕೊಳ್ಳಲು ಪರದಾಡಿದರು. ಬಾವಿಯೊಳಗಿದ್ದ ಫುಟ್​ಬಾಲ್​ ಪೈಪ್​ಗೆ ಕಟ್ಟಿದ್ದ ಹಗ್ಗ ಸಿಕ್ಕಿದ್ದು, ಅದನ್ನೇ ಹಿಡಿದುಕೊಂಡೇ ಇದ್ದರು. ತನ್ನನ್ನು ಉಳಿಸಿ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಸಹ ಅವರ ಬಾಯಿಂದ ಹೊರಬಂದ ಆರ್ತನಾದ ಬಾವಿಯಿಂದ ಮೇಲಕ್ಕೆ ಯಾರಿಗೂ ಕೇಳಿಸಲೇ ಇಲ್ಲ. 

ಅಗ್ನಿಶಾಮಕ ದಳದ ಕಾರ್ಯಾಚರಣೆ

ಪರಿಚಯದ ಗಣೇಶ್​ ಅವರ ಮೂಲಕ ಶ್ರೀನಿವಾಸ ಅವರು ಬಾವಿಯಲ್ಲಿ ಇರುವುದು ತಿಳಿಯಿತು. ಕೂಡಲೇ ಸ್ಥಳೀಯರು ಬಾವಿಗೆ ಏಣಿ ಹಾಕಿ ಅವರನ್ನು ಮೇಲಕ್ಕೆ ಬರಲು ಹೇಳಿದರು. ಆದರೆ, ಮೂರು ದಿನದಿಂದ ಆಹಾರವಿಲ್ಲದೆ ನಿತ್ರಾಣಗೊಂಡಿದ್ದರಿಂದ ಅವರಿಗೆ ಮೇಲೆ ಬರಲು ಆಗಲಿಲ್ಲ. ಹೀಗಾಗಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿ ಕರೆಸಲಾಯಿತು. ಸೋಮವಾರ (ಏ.5) ರಾತ್ರಿ 9 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತೀಶ್​, ಅಶ್ವಿನ್​ ಸನಿಲ್​, ಚಾಲಕ ಭರತ್​ ಎನ್​., ಫೈರ್​ ಫೈಟರ್​ಗಳಾದ ಗಣೇಶ್​ ವಿ., ಮಹಾಂತೇಶ್​ ಅವರು ಸ್ಥಳೀಯರ ಸಹಕಾರದಿಂದ ಬಾವಿಯೊಳಗೆ ಇಳಿದು ಶ್ರೀನಿವಾಸ ಆಚಾರ್ಯ ಅವರನ್ನು ರಕ್ಷಿಸಿ, ಮೇಲಕ್ಕೆ ತಂದರು. ಬಳಿಕ ರಾತ್ರಿ 9.50ರ ವೇಳೆಯಲ್ಲಿ ಆಂಬುಲೆನ್ಸ್​ ಮೂಲಕ ಸ್ಥಳಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ, ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದೆ. ಇದೀಗ ಅವರು ಚೇತರಿಸಿಕೊಂಡಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ.

ಜೀವ ಉಳಿಸಿತು ಗ್ಯಾಸ್​ ಸಿಲಿಂಡರ್​!

ಮನೆಯಲ್ಲಿ ಗ್ಯಾಸ್​ ಸಿಲಿಂಡರ್​ ಖಾಲಿಯಾಗಿದ್ದರಿಂದ ಬುಕ್​ ಮಾಡಿದ್ದರೂ ಸಹ ಬಂದಿರಲಿಲ್ಲ. ಹೀಗಾಗಿ ಪರಿಚಯದ ಗಣೇಶ್​ ಎಂಬವರ ಬಳಿ ಗ್ಯಾಸ್​ ಸಿಲಿಂಡರ್​ ಪಡೆದಿದ್ದರು. ಬಳಿಕ ಗಣೇಶ್​ ಅವರು ಗ್ಯಾಸ್​ ಸಿಲಿಂಡರ್​ ಕುರಿತು ವಿಚಾರಿಸಿದಾಗ ತನಗೆ ಇನ್ನೂ ಸಿಲಿಂಡರ್​ ಬಂದಿಲ್ಲ ಎಂದು ತಿಳಿಸಿದ್ದರು. ಮೂರ್ನಾಲ್ಕು ದಿನದ ಬಳಿಕ ಗ್ಯಾಸ್​ ಏಜೆನ್ಸಿಗೆ ಕರೆ ಮಾಡಿ ಶ್ರೀನಿವಾಸ ಅವರಿಗೆ ಬೇಗ ಗ್ಯಾಸ್​ ಪೂರೈಸುವಂತೆ ಕೇಳಿದರು. ಆಗ ಗ್ಯಾಸ್​ ಸಿಬ್ಬಂದಿ, ಎರಡು ದಿನವಾಯ್ತು ಅವರು ಮನೆಯಲ್ಲಿಲ್ಲ ಎಂದರು. ಅದರಿಂದ ಸಂಶಯಗೊಂಡ ಗಣೇಶ್​, ಶ್ರೀನಿವಾಸ ಅವರ ಮನೆಯ ಸಮೀಪದವರಿಗೆ ಕರೆ ಮಾಡಿ ಭಟ್ಟರ ಮನೆಗೆ ತೆರಳಿ ಪರಿಶೀಲಿಸುವಂತೆ ಹೇಳಿದ್ದರು. ಅವರು ಶ್ರೀನಿವಾಸ ಅವರ ಮನೆಗೆ ಬಂದು ಹುಡುಕಾಟ ನಡೆಸಿದರು. ಆ ವೇಳೆ ಅವರು ಬಾವಿಯಲ್ಲಿ ಬಿದ್ದು, ಹಗ್ಗ ಹಿಡಿದುಕೊಂಡು ನಿಂತು ನಿತ್ರಾಣ ಆಗಿರುವುದು ಪತ್ತೆಯಾಯಿತು.