ಮೂಲ್ಕಿ ಕಾರ್ನಾಡಿನ ಗೇರುಕಟ್ಟೆಯಲ್ಲಿ 1.30 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಪ್ರಜಾ ಸೌಧವನ್ನು ಲೋಕಾರ್ಪಣೆಗೊಳಿಸಲಾಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಉಮಾನಾಥ ಎ.ಕೋಟ್ಯಾನ್ ಇದ್ದರು. 
ಉಡುಪಿ

ಆಶೋತ್ತರಗಳನ್ನು ಪೂರೈಸುವ ಆಡಳಿತ ಕೇಂದ್ರ

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಮೂಲ್ಕಿ ಪ್ರದೇಶದ ಜನರ ಬಹುದಿನಗಳ ಕನಸಾದ ಮೂಲ್ಕಿ ತಾಲೂಕು ನಿರ್ಮಾಣದ ಜತೆಗೆ ಸರ್ಕಾರ ಜನರ ಬಳಿ ಬಂದು ಮೂಲಸೌಕರ್ಯ ನೀಡುವ ತಾಲೂಕು ಆಡಳಿತ ಕೇಂದ್ರ ಪ್ರಜಾಸೌಧವನ್ನು ಲೋಕಾರ್ಪಣೆ ಮಾಡುವ ಮೂಲಕ ಜನರ ಆಶೋತ್ತರಗಳನ್ನು ಪೂರೈಸುವ ಪ್ರಯತ್ನ ಮಾಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ದ.ಕ.ಜಿಲ್ಲಾಡಳಿತ ಮತ್ತು ಕರ್ನಾಟಕ ಗೃಹ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿ ಕಾರ್ನಾಡಿನ ಗೇರುಕಟ್ಟೆಯಲ್ಲಿ 1.30 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾಗಿ 10 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ತಾಲೂಕು ಆಡಳಿತ ಕೇಂದ್ರ ಪ್ರಜಾಸೌಧ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿದರು. ಶಾಸಕ ಉಮಾನಾಥ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಮತ್ತು ಮೂಡಬಿದಿರೆ ತಾಲೂಕು ವ್ಯಾಪ್ತಿಯ 94ಸಿ ಮತ್ತು 94ಸಿಸಿಯಡಿ 300 ಹಕ್ಕುಪತ್ರಗಳನ್ನು ವಿತರಿಸಲಾಯಿತು. ಮೂಲ್ಕಿ ಪ್ರಜಾಸೌಧ ನಿರ್ಮಾಣಕ್ಕೆ ಸಹಕಾರ ನೀಡಿದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ದೇವಿಯ ಬೆಳ್ಳಿಯ ಫೋಟೋ ಮತ್ತು ವಿಶೇಷ ಶೇಷವಸ್ತ್ರದೊಂದಿಗೆ ಗೌರವಿಸಲಾಯಿತು. ಕಟ್ಟಡದ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಶಾಸಕ ಕಿಶೋರ್ ಬಿ.ಆರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ. ಎ.ಗಪೂರ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್, ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ. ಎಸ್.ಗಟ್ಟಿ, ದ.ಕ.ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಸ್ವಾಗತಿಸಿ ಪ್ರಸ್ತಾವಿಸಿದರು. ಡಾ.ಮಂಜುಳಾ ಶೆಟ್ಟಿ ನಿರೂಪಿಸಿದರು, ಮೂಲ್ಕಿ ತಹಸೀಲ್ದಾರ್ ಶ್ರೀಧರ
ಮುಂದಲಮನಿ ವಂದಿಸಿದರು.

ಕಂದಾಯ ಇಲಾಖೆಯನ್ನು ಅಧುನೀಕರಣಗೊಳಿಸಿ ಭ್ರಷ್ಟಾಚಾರ ಮುಕ್ತವಾಗುವಂತೆ ರೂಪಿಸುವಲ್ಲಿ ಕೃಷ್ಣ ಬೈರೇಗೌಡರ ಕಾರ್ಯ ಅಭಿನಂದನೀಯ. ಮುಂದಿನ ದಿನಗಳಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ 70 ಕೋಟಿ ರೂ.ವೆಚ್ಚದ ನೂತನ ಒಪಿಡಿ ಸಹಿತ ವಿವಿಧ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ವತ್ರೆಗಳಲ್ಲಿ ಸಿಬ್ಬಂದಿ ಸಹಿತ ವ್ಯವಸ್ಥಿತವಾಗಿರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಉನ್ನತೀಕರಣದ ಯೋಜನೆಯಡಿ ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್ ರಸ್ತೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಅಪಘಾತ ಪ್ರದೇಶಗಳಾದ ಹಳೆಯಂಗಡಿ, ಮೂಲ್ಕಿ ಮುಂತಾದ ಕಡೆಗಳಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಯೋಜನೆ ಪರಿಶೀಲನೆಯಲ್ಲಿದೆ.

ಮೂಲ್ಕಿಯ ಹಿರಿಯರ ತಾಲೂಕು ನಿರ್ಮಾಣ ಹೋರಾಟಕ್ಕೆ ಇಂದು ಫಲ ಲಭಿಸಿದೆ. ಅನುದಾನ ಕ್ರೋಡೀಕರಣದಲ್ಲಿ ಸಹಕರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಉಸ್ತುವಾರಿ ಸಚಿವ ದಿನೇಶ್‌ಗುಂಡೂರಾವ್ ಅವರನ್ನು ಸ್ಮರಿಸುವುದು ಬಹಳ ಅಗತ್ಯ. ವಿವಿಧ ಇಲಾಖೆಗಳ ಸಹಿತ ಶಾಸಕರ ಕೊಠಡಿಯೂ ಇದ್ದು ವಾರದಲ್ಲಿ ಒಂದು ದಿನ ಜನರಿಗಾಗಿ ಲಭ್ಯವಿರುತ್ತೇನೆ. ಮೂಲ್ಕಿಯ ಮುಂದಿನ ಅಗತ್ಯಗಳಿಗಾಗಿ ನ್ಯಾಯಾಲಯ ಮತ್ತು ಅಗ್ನಿಶಾಮಕ ದಳ ನಿರ್ಮಾಣಕ್ಕಾಗಿ ಸ್ಥಳ ಕಾದಿರಿಸಲಾಗಿದೆ.